ಉದಯಕಾಲ ನ್ಯೂಸ್, ಹಾಸನ: ಜಿಲ್ಲೆಯ ಐತಿಹಾಸಿಕ ಹಾಸನಾಂಬ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಮುಕ್ತಾಯಗೊಂಡಿದೆ. ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ನಡೆದ ಸಿದ್ದೇಶ್ವರಸ್ವಾಮಿ ಕೆಂಡೋತ್ಸವದ ವೇಳೆ ರೋಚಕ ಹಾಗೂ ಆತಂಕಕಾರಿ ಘಟನೆಗಳು ನಡೆದಿವೆ. ಕೆಂಡದ ಮೇಲೆ ನಡೆಯುವಾಗ ಹಾಸನ ಸಂಸದ ಶ್ರೇಯಸ್ ಪಟೇಲ್ ಆಯತಪ್ಪಿ ಜಾರಿದ ಘಟನೆ ಕೆಲಕಾಲ ಆತಂಕ ಸೃಷ್ಟಿಸಿತ್ತು. ಆದರೆ ಗನ್‌ಮೆನ್ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ಆಯತಪ್ಪಿ ಬಿದ್ದ ಸಂಸದ
ಹಾಸನಾಂಬ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ಗರ್ಭಗುಡಿ ಬಾಗಿಲು ಮುಚ್ಚುವ ಮೊದಲು ಸಂಪ್ರದಾಯದಂತೆ ಸಿದ್ದೇಶ್ವರಸ್ವಾಮಿ ಕೆಂಡೋತ್ಸವ ಜರುಗಿತು. ಈ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಹಾಸನ ಸಂಸದ ಶ್ರೇಯಸ್ ಪಟೇಲ್ ಅವರು ಕೆಂಡದ ಮೇಲೆ ನಡೆಯುತ್ತಿದ್ದರು. ಕೊಂಡದ ಕೊನೆಯ ಭಾಗಕ್ಕೆ ಬಂದಾಗ ಆಯತಪ್ಪಿ ಅವರು ಕೆಂಡದ ಹತ್ತಿರ ಜಾರಿದರು.
ಕೂಡಲೇ ಎಚ್ಚೆತ್ತ ಅವರ ಗನ್‌ಮೆನ್ ರಂಜನ್ ತಕ್ಷಣವೇ ರಕ್ಷಣೆಗೆ ಧಾವಿಸಿ ಸಂಸದರನ್ನು ಗಟ್ಟಿಯಾಗಿ ಹಿಡಿದು ಮೇಲೆತ್ತಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಸುಟ್ಟ ಗಾಯಗಳಾಗದೆ ಸಂಸದರು ಸುರಕ್ಷಿತವಾಗಿ ಪಾರಾದರು. ಇದೇ ವೇಳೆ ಹಾಸನ ಡಿವೈಎಸ್‌ಪಿ ಗಂಗಾಧರಪ್ಪ ಹಾಗೂ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ನೂರಾರು ಭಕ್ತರು ಭಕ್ತಿಭಾವದಿಂದ ಕೆಂಡ ಹಾಯ್ದು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಮತ್ತೊಂದೆಡೆ, ಕೆಂಡ ಹಾಯುವಾಗ ಕೆಲವರು ಆಯತಪ್ಪಿ ಬಿದ್ದ ಘಟನೆಗಳು ನಡೆದಿದ್ದು, ಅಲ್ಲಿದ್ದ ಸ್ಥಳೀಯರು ಮತ್ತು ಸ್ವಯಂಸೇವಕರು ತಕ್ಷಣವೇ ಅವರನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
30 ಲಕ್ಷ ಭಕ್ತರ ಭೇಟಿ: ಹರಿದು ಬಂತು 25 ಕೋಟಿ ರೂ. ಆದಾಯ!
ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವವು ಭಕ್ತರ ಸಂಖ್ಯೆ ಹಾಗೂ ಆದಾಯದ ದೃಷ್ಟಿಯಿಂದ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗ್ಗಿನವರೆಗೆ ನಡೆದ ಉತ್ಸವದಲ್ಲಿ ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ತಾಯಿ ಹಾಸನಾಂಬೆಯ ದರ್ಶನ ಪಡೆದು ಧನ್ಯರಾದರು. ಮುಂಜಾನೆ 6 ಗಂಟೆಯವರೆಗೆ ಭಕ್ತರಿಗೆ ನಿರಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ವಿಶೇಷ ದರ್ಶನ ಟಿಕೆಟ್‌ಗಳು (ರೂ. 1000 ಮತ್ತು ರೂ. 300) ಹಾಗೂ ಪ್ರಸಾದ ಲಾಡು ಮಾರಾಟದಿಂದ ದೇವಸ್ಥಾನದ ಹುಂಡಿ ಹಾಗೂ ಕೌಂಟರ್‌ಗಳಿಗೆ ಬರೋಬ್ಬರಿ 25 ಕೋಟಿ 36 ಲಕ್ಷ ರೂ.ಗೂ ಅಧಿಕ ಆದಾಯ ಹರಿದುಬಂದಿದೆ. ಇದು ಹಾಸನಾಂಬೆ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಆದಾಯವೆನಿಸಿದೆ. ಮಧ್ಯಾಹ್ನ 12 ಗಂಟೆಯ ನಂತರ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗಿದ್ದು, ಮುಂದಿನ ವರ್ಷದ ಜಾತ್ರೆಗಾಗಿ ಭಕ್ತರು ಈಗಲೇ ಕಾತರದಿಂದ ಕಾಯುತ್ತಿದ್ದಾರೆ.
#HasanambaTemple #HasanambaFestival #MPShreyasPatel #HasanNews #Udayakala #Kendotsava #KarnatakaNews #DevotionalUpdate


