ಉದಯಕಾಲ ನ್ಯೂಸ್,ಬಳ್ಳಾರಿ: ಆಂಧ್ರಪ್ರದೇಶದ ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಜರುಗಿದ ಐತಿಹಾಸಿಕ ‘ಬಡಿಗೆ ಕಾಳಗ’ವು ತೀವ್ರ ಸ್ವರೂಪ ಪಡೆದುಕೊಂಡು ಅಕ್ಷರಸಃ ರಕ್ತಸಿಕ್ತ ಘಟನೆ ನಡೆದಿದೆ. ಬಡಿಗೆ ಬಡಿದಾಟದ ಈ ವಿಕೋಪದಲ್ಲಿ ಆಲೂರಿನ ಪೋತರಾಜು (30) ಎಂಬ ಭಕ್ತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 80ಕ್ಕೂ ಅಧಿಕ ಜನರು ಗಂಭೀರ ಹಾಗೂ ಸಾಧಾರಣ ಗಾಯಗೊಂಡಿದ್ದಾರೆ.
ಬಡಿಗೆ ಕಾಳಗದ ಆಚರಣೆ
ಪ್ರತಿ ವರ್ಷ ವಿಜಯದಶಮಿಯ ರಾತ್ರಿ ಉತ್ಸವ ಮೂರ್ತಿಯನ್ನು ತಮ್ಮ ತಮ್ಮ ಗ್ರಾಮಗಳಿಗೆ ಕೊಂಡೊಯ್ಯಲು ಭಕ್ತರ ಮಧ್ಯೆ ಈ ಬಡಿಗೆ ಕಾಳಗ (ದಂಡ ಕಾಳಗ) ನಡೆಯುವುದು ಇಲ್ಲಿನ ವಾಡಿಕೆ. ಸಂಪ್ರದಾಯದಂತೆ ಆಂಧ್ರ ಹಾಗೂ ಕರ್ನಾಟಕದ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಉತ್ಸವ ಮೂರ್ತಿಯನ್ನು ವಶಪಡಿಸಿಕೊಳ್ಳುವ ಈ ನಂಬಿಕೆಯಾಟದಲ್ಲಿ ಭಕ್ತರು ಬಡಿಗೆಯಿಂದ ಪರಸ್ಪರ ಹೊಡೆದಾಡಿಕೊಳ್ಳುವುದುಂಟು. ಈ ಕಾಳಗದಲ್ಲಿ ರಕ್ತ ಚಿಮ್ಮಿದ ಬಳಿಕವಷ್ಟೇ ಕಾಳಗ ಸಂಪನ್ನಗೊಳ್ಳುತ್ತದೆ ಎಂಬುದು ಇಲ್ಲಿನ ಹಳೆಯ ಪ್ರತೀತಿಯಾಗಿದೆ.
ಪೊಲೀಸರ ಮೇಲೂ ಕಲ್ಲುತೂರಾಟ
ಹಿಂಸಾತ್ಮಕವಾಗಿ ತಿರುಗಿದ್ದ ಬಡಿಗೆ ಬಡಿದಾಟವನ್ನು ನಿಯಂತ್ರಿಸಲು ಮುಂದಾದ ಕರ್ತವ್ಯನಿರತ ಪೊಲೀಸರ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಕೆಲ ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಸುಮಾರು 80 ಜನರನ್ನು ತಕ್ಷಣವೇ ಆಲೂರಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರಲ್ಲಿ 8 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಜಾತ್ರೆಯಲ್ಲಿ ಗುಡ್ಡದ ಮಲ್ಲಯ್ಯ ಪ್ರಕೃತಿ ಹಾಗೂ ರೈತರ ಬಗ್ಗೆ ಕಾರ್ಣಿಕ ನುಡಿದು ಎಚ್ಚರಿಕೆ ನೀಡಿದ್ದರೂ, ಭಕ್ತರ ಆವೇಶದ ಬಡಿದಾಟ ಮತ್ತೊಮ್ಮೆ ಜೀವಹಾನಿಗೆ ಕಾರಣವಾಗಿರುವುದು ಆತಂಕದ ಸಂಗತಿಯಾಗಿದೆ.
#GuddadaMallayyaJatre #BadigeKalaga #BallariNews #AndhraPradesh #UdayakalaNews #Devaragudda #FestivalAccident


