Menu

ತಮಿಳುನಾಡಲ್ಲಿ ವಿಜಯ್ ಅವರನ್ನು ದೇವರೇ ಕಾಪಾಡಬೇಕು: ಹೆಚ್‌ಡಿಕೆ

hd kumarswamy

ತಮಿಳುನಾಡಿನಲ್ಲಿ ವಿಜಯ್‌ ಅವರನ್ನು ದೇವರೇ ಕಾಪಾಡಬೇಕು. ತಮಿಳುನಾಡು ರಾಜ್ಯದ ಬಜೆಟ್ ಗಾತ್ರ 3.5 ಲಕ್ಷ ಕೋಟಿ ರೂಪಾಯಿ. ಆದರೆ ಇವರು ಭರವಸೆಗಳನ್ನು ನೀಡಿರುವ ಫ್ರೀ ಬೀಸ್ ಗಳಿಗೆ ಕಡಿಮೆ ಎಂದರೂ 6 ಲಕ್ಷ ಕೋಟಿ ರೂಪಾಯಿ ಬೇಕು. ಅಷ್ಟು ಹಣವನ್ನು ಎಲ್ಲಿಂದ ತರುತ್ತಾರೆ ಎಂದು  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಹಾಸನ ಜಿಲ್ಲೆಯ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದಲ್ಲಿ  ದೇವರ ದರ್ಶನ ಪಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಇನ್ನೆರಡು ಮೂರು ದಿನಗಳಲ್ಲಿ ತಮಿಳುನಾಡು ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟು ಬಗೆಹರಿಯಬಹುದು. ದಶಕಗಳಿಂದ ರಾಜಕೀಯ ಎದುರಾಳಿಗಳಾಗಿ ಹೋರಾಟ ನಡೆಸಿರುವ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚಿಸುತ್ತವೆ ಎಂದು ನಾನಾದರೂ ಭಾವಿಸುವುದಿಲ್ಲ ಎಂದು  ಹೇಳಿದರು.

ತಮಿಳುನಾಡಿನಲ್ಲಿ ಸದ್ಯಕ್ಕೆ ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯಪಾಲರು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲಿನ ಕಾನೂನು ಪಂಡಿತರ ಸಲಹೆಗಳನ್ನು ತೆಗೆದುಕೊಂಡು ಸರ್ಕಾರ ರಚನೆಯ ಬಗ್ಗೆ ಕ್ರಮಗಳನ್ನು ವಹಿಸುತ್ತಿದ್ದಾರೆ. ಮುಂದೆ ಏನೆಲ್ಲ ಕಾದು ನೋಡಬೇಕಾಗಿದೆ. ನಿಮಗೆ ಬೆಂಬಲವಿರುವ ಶಾಸಕರ ಸಹಿ ಇರುವ ಪುಟ್ಟಿಯೊಂದಿಗೆ ಬನ್ನಿ ಎಂದು ರಾಜ್ಯಪಾಲರು ವಿಜಯ್ ಅವರಿಗೆ ಸೂಚಿಸಿದ್ದಾರೆ. ಆ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯಪಾಲರು ಹೆಜ್ಜೆ ಇಡುತ್ತಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವ ಪ್ರಶ್ನೆ ಬರುವುದಿಲ್ಲ ಎಂದು ಕೆಲಸ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿಎಂಕೆ-ಎಐಎಡಿಎಂಕೆ ಸೇರಿ ಸರ್ಕಾರ ರಚಿಸುವ ವಿಚಾರ ಕೇವಲ ಊಹಾಪೋಹದ ಸುದ್ದಿಯಾಗಿದೆ ಎಂದು ಹೇಳಿದರು. ರಾಜ್ಯಪಾಲರು ಕಾನೂನು ತಜ್ಞರ ಸಲಹೆ ಪಡೆದು ಸ್ಪಷ್ಟ ಬಹುಮತದ ಸಂಖ್ಯೆ ಗಮನಕ್ಕೆ ತೆಗೆದುಕೊಂಡಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತ ಜನ ನೋಡಿದ್ದಾರೆ. ಹೊಸ ವ್ಯವಸ್ಥೆಗೆ ಜನ ಅವಕಾಶ ನೀಡಿದ್ದಾರೆ” ಎಂದರು. ತಮಿಳುನಾಡಿನ ರಾಜಕಾರಣದಲ್ಲಿ ಸಿನಿಮಾ ಪ್ರಭಾವ ಹೆಚ್ಚಿದೆ ಎಂದೂ ಅಭಿಪ್ರಾಯಪಟ್ಟರು.

ಶೃಂಗೇರಿ ಮರುಎಣಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಫ್‌ಐಆರ್ ದಾಖಲಾಗಿದ್ದು, ಚುನಾವಣಾ ಆಯೋಗಕ್ಕೆ ಮತ್ತೊಂದು ದೂರು ಸಲ್ಲಿಕೆಯಾಗಿದೆ ಎಂದರು. “ಓಟ್ ಚೋರಿ ಬಗ್ಗೆ ಈಗ ಚರ್ಚೆ ಮಾಡುವುದಕ್ಕೆ ಅರ್ಥವೂ ಇಲ್ಲ, ನೈತಿಕತೆಯೂ ಇಲ್ಲ” ಎಂದು ಹೇಳಿದರು.

ಕರ್ನಾಟಕದ ಮುಂದಿನ ರಾಜಕೀಯ ಪರಿಸ್ಥಿತಿಯ ಕುರಿತು ಮಾತನಾಡಿದ ಕುಮಾರಸ್ವಾಮಿ, “ರಾಜ್ಯದಲ್ಲಿ ಬದಲಾವಣೆ ಆಗಬಹುದು ಎಂಬ ಚರ್ಚೆ ಜನಸಾಮಾನ್ಯರಲ್ಲಿ ಇದೆ. ಆದರೆ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ಇಲ್ಲ” ಎಂದರು.ಇಡಿ ಹಾಗೂ ಐಟಿ ದುರುಪಯೋಗದ ಬಗ್ಗೆ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿ, “ಅವರಿಗೆ ಬೇಕಾದಾಗ ಚೆನ್ನಾಗಿದೆ ಅಂತಾರೆ, ಸೋತಾಗ ಚೆನ್ನಾಗಿಲ್ಲ ಅಂತಾರೆ” ಎಂದು ಟೀಕಿಸಿದರು.

ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿ, “ಸ್ಪಷ್ಟ ಬಹುಮತ ಬಂದಿದೆ ಎಂದು ಚುನಾವಣಾ ಆಯೋಗ ಘೋಷಿಸಿದ ನಂತರ ವಿಷಯ ಮುಗಿದಂತೆಯೇ. ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡಲ್ಲ ಎನ್ನುವುದು ಬಾಲೀಷ ಹೇಳಿಕೆ” ಎಂದರು.ಬಿಜೆಪಿ ನಾಯಕ ಬಿ. ಎಸ್. ಯಡಿಯೂರಪ್ಪ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದಾಗಿ ತಿಳಿಸಿದ ಕುಮಾರಸ್ವಾಮಿ, “ಬೇರೆ ಕಾರ್ಯಕ್ರಮ ಇರುವುದರಿಂದ ಹೋಗುತ್ತಿಲ್ಲ” ಎಂದರು.

Related Posts

Leave a Reply

Your email address will not be published. Required fields are marked *