Friday, September 18, 2026
Menu

ಹತ್ತು ಲಕ್ಷಕ್ಕೆ ಒಂದು ಕೋಟಿ ವಾಪಸ್‌ ಆಮಿಷ: ವಂಚಕರ ಬಂಧನ

ಹತ್ತು ಲಕ್ಷ ರೂಪಾಯಿ ನೀಡಿದರೆ ವಾಪಸ್‌ ಒಂದು ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ ವಂಚಿಸುತ್ತಿದ್ದ ಗ್ಯಾಂಗ್‌ ಅನ್ನು ಬಯಲಿಗೆಳೆದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ದಿ. ಜಯಲಲಿತಾ ಅವರ ಬೇನಾಮಿ ಅಸ್ತಿ ಬಂದಿದೆ, ಹತ್ತು ಲಕ್ಷ ನೀಡಿದರೆ ಒಂದು ಕೋಟಿ ರೂಪಾಯಿ ಸಿಗಲಿದೆ ಎಂದು ಆರ್‌ಬಿಐ ಮ್ಯಾನೇಜರ್‌ ಎಂದು ಒಬ್ಬನನ್ನು ತೋರಿಸಿದ ವಂಚಕರ ಗ್ಯಾಂಗ್‌ ಸಾರ್ವಜನಿಕರಿಂದ ಕೋಟಿ ಕೋಟಿ ರೂಪಾಯಿ ದೋಚಿದೆ. ಮುಖ್ಯ ಆರೋಪಿ ಯಳಚೇನಹಳ್ಳಿ ಶಶಿಕುಮಾರ್ ಎಂಬಾತನನ್ನು ಮೊದಲು ಅರೆಸ್ಟ್​​ ಮಾಡಿದ್ದ ಪೊಲೀಸರು, ಉಳಿದ ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖ ಆರೋಪಿ ಯಳಚೇನಹಳ್ಳಿ ಶಶಿಕುಮಾರ್ ಕಳೆದ ಹಲವು ವರ್ಷಗಳಿಂದ ಸ್ನೇಹಿತರು ಮತ್ತು ಸ್ಥಳೀಯರನ್ನು ಇದೇ ರೀತಿ ನಂಬಿಸಿದ್ದರು. ವೀಡಿಯೊ ಕಾಲ್​​ನಲ್ಲಿ ಮೂಟೆಗಳಲ್ಲಿ ಹಣ ತೋರಿಸಿ ಜನರ ವಿಶ್ವಾಸ ಗಳಿದ್ದ ಈತ ಹೊಸಕೋಟೆ ಸುತ್ತಮುತ್ತ 4.5 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದ. ಚೆಕ್, ನಗದು ಮತ್ತು ಚಿನ್ನಾಭರಣ ಪಡೆದು ವಂಚಿಸಿದ್ದ ಆರೋಪದಡಿ ಕಳೆದ ತಿಂಗಳು ಕೇಸ್​​ ದಾಖಲಾಗಿತ್ತು. ಬಳಿಕ ಗ್ಯಾಂಗ್‌ನ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು, ಈಗ ಶಶಿಕುಮಾರ್, ನಾಗೇಶ್, ಪ್ರಮೀಳ ಶಶಿಕುಮಾರ್, ಅಂಬುಜಾ ಶಶಿಕುಮಾರ್, ವೆಂಕಟರವಣಪ್ಪ ಎಂಬವರನ್ನೂ ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಮಾಹಿತಿ ನೀಡಿದ್ದು, ಆರೋಪಿ ಶಶಿಕುಮಾರ್ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾನೆ. ಕೊಟ್ಟ ಹಣ ಕೇಳಲು ಹೋದರೆ ಬೌನ್ಸರ್ಗಳ ಮೂಲಕ ಬೆದರಿಕೆ, ಹೆಚ್ಚು ಒತ್ತಡ ಹಾಕಿದರೆ ಕೆಲವು ದಲಿತ ನಾಯಕರಿಂದ ಧಮ್ಕಿ ಹಾಕಿಸುತ್ತಿದ್ದ. ದಲಿತ ಸಂಘಟನೆ ಮುಖಂಡರಿಗೆ ಹಣ ನೀಡಿ ಬಳಸಿಕೊಳ್ಳುತ್ತಿದ್ದ. ಪೊಲೀಸರಿಗೂ ಆವಾಜ್​​ ಹಾಕಿಸುತ್ತಿದ್ದ. ಈ ಸಂಬಂಧ ದಲಿತ ಮುಖಂಡ ನಾಗೇಶ್​​ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಆರೋಪಿಗಳು ಸಾರ್ವಜನಿಕರಿಂದ ದೋಚಿದ್ದ ಹಣದಲ್ಲಿ ವಾಹನ, ಜಮೀನು ಖರೀದಿಸಿದ್ದರು. ಮತ್ತಷ್ಟು ಜನ ದೂರು‌ ನೀಡುವ ನಿರೀಕ್ಷೆಯಿದ್ದು, ದೂರು ಬಂದರೆ ತನಿಖೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *