Thursday, September 17, 2026
Menu

ನಟ ಅನಂತ್‌ ನಾಗ್‌ಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ

ಹಿರಿಯ ನಟ ಅನಂತ್‌ ನಾಗ್‌ ಅವರನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ‘ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ 2024’ಕ್ಕೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಸೆಪ್ಟೆಂಬರ್ 22 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಹಾಗೂ ತಲೆಮಾರುಗಳಿಗೆ ಸ್ಫೂರ್ತಿಯಾಗಿರುವ ಅವರ ಅದ್ಭುತ ಸಿನಿಮಾ ಪಯಣಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 2024′ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಗುಜರಾತ್‌ನ ಕೆವಾಡಿಯಾದಲ್ಲಿ 2026ರ ಸೆಪ್ಟೆಂಬರ್ 22 ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅನಂತ್ ನಾಗ್ ಅವರನ್ನು ಅಭಿನಂದಿಸಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ದಿಗ್ಗಜ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ನಿಜಕ್ಕೂ ಅತ್ಯುನ್ನತ ಕಲಾವಿದರೊಬ್ಬರಿಗೆ ಸಂದ ಸೂಕ್ತ ಗೌರವವಿದು ಎಂದು ಹೇಳಿದಾರೆ.

ಸೆಪ್ಟೆಂಬರ್ 4, 1948 ರಂದು ಜನಿಸಿದ ಅನಂತ ನಾಗ್ ವೃತ್ತಿಜೀವನದಲ್ಲಿ 250ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು ಸೇರಿದಂತೆ ಒಟ್ಟು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರಗಳಲ್ಲದೆ ಕಿರುತೆರೆ, ರಂಗಭೂಮಿಯಲ್ಲೂ ಅನಂತ್ ಹೆಸರು ಮಾಡಿದ್ದಾರೆ. ಲೇಖಕ ಆರ್.ಕೆ. ನಾರಾಯಣ್ ಅವರ ಕಥೆಗಳನ್ನು ಆಧರಿಸಿದ ದೂರದರ್ಶನ ಧಾರಾವಾಹಿ ‘ಮಾಲ್ಗುಡಿ ಡೇಸ್’ನಲ್ಲಿ ನಟಿಸಿದ್ದಾರೆ. ವೃತ್ತಿಜೀವನದಲ್ಲಿ ಐದು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. 2025ರಲ್ಲಿ ಕೇಂದ್ರ ಸರ್ಕಾರ ಅನಂತ ನಾಗ್ ಅವರಿಗೆ ‘ಪದ್ಮಭೂಷಣ’ ನೀಡಿ ಗೌರವಿಸಿದೆ.

Related Posts

Leave a Reply

Your email address will not be published. Required fields are marked *