ನಮಗೆ ರಾಜಕೀಯಕ್ಕಿಂತ ಜನರ ಬದುಕು ಮುಖ್ಯ. ಯಾವುದೇ ಪಕ್ಷದ ನಾಯಕರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಹೊರತು, ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ. ಎಲ್ಲರ ಚಿಂತನೆಯಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು. ಗಾಂಧಿ ಅವರು ಉಳಿದುಕೊಂಡಿದ್ದ ಮನೆಗೆ ಹೋಗಿ ಅಲ್ಲಿ ಉಪಹಾರ ಸೇವಿಸಿದೆ. ಮಂಗಳೂರು ಬನ್ಸ್, ದೋಸೆ ಸವಿದೆ. ಜಿಲ್ಲಾಮಂತ್ರಿಗಳು ಎಲ್ಲಿ ಕರೆದುಕೊಂಡು ಹೋಗುತ್ತಾರೊ ಅಲ್ಲಿಗೆ ಹೋಗುವೆ ಎಂದು ಹೇಳಿದರು.
ಸಿಎಂ ಮಂಗಳೂರು ಮೂಲದ ಸಾಮಾಜಿಕ ಜಾಲತಾಣದ ಪ್ರಭಾವಿಗಳ ಜತೆ ಮಂಗಳೂರಿನ ಕೆಫೆಯಲ್ಲಿ ಸಂವಾದ ನಡೆಸಿದರು. ಬಳಿಕ ಸಂಪುಟ ಸಹೋದ್ಯೋಗಿಗಳ ಜತೆ ಮಂಗಳೂರಿನ ಕದ್ರಿಯ ಮಂಜುನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಂಗಳೂರಿನ ಸರ್ಕಿಟ್ ಹೌಸ್ ಬಳಿಯ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ವಿಶೇಷ ಸಚಿವ ಸಂಪುಟ ಸಭೆಗೆ ಮಂಗಳೂರಿನ ಸರ್ಕಿಟ್ ಹೌಸ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಂಬಾರಿ ಬಸ್ (ತೆರೆದ ವಾಹನ) ಮೂಲಕ ಮುಖ್ಯಮಂತ್ರಿ ಸಹೋದ್ಯೋಗಿಗಳ ಜೊತೆ ಸಾಗಿದರು. ದಾರಿಯುದ್ದಕ್ಕೂ ಶಾಲಾ ವಿದ್ಯಾರ್ಥಿಗಳು ಹಾಗೂ ಕಲಾವಿದರ ತಂಡಗಳು ಪ್ರದರ್ಶನ ನಡೆಸಿ ಸ್ವಾಗತಿಸಿದರು.


