ಸಿನಿಮಾ ಟಿಕೆಟ್ಗಳ ಮೇಲೆ ಶೇ ಎರಡರಷ್ಟು ಹೆಚ್ಚುವರಿ ಸೆಸ್ ವಿಧಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಸೆ. ೩೦ರಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರವು 2024 ರಲ್ಲಿ ಮಂಡಿಸಿದ್ದ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಮಸೂದೆಗೆ 2024ರ ಸೆಪ್ಟೆಂಬರ್ 23 ರಂದು ರಾಜ್ಯಪಾಲರು ಅಧಿಕೃತ ಅಂಕಿತ ಹಾಕಿದ್ದರು. ಸೆಪ್ಟೆಂಬರ್ 24 ರಂದು ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿತ್ತು. ಎರಡು ವರ್ಷಗಳ ಬಳಿಕ ಈ ಅಧಿನಿಯಮವನ್ನು ಜಾರಿಗೆ ತರಲಾಗುತ್ತಿದೆ.
ಇನ್ನು ಮುಂದೆ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ ಗ್ರಾಹಕರು ಟಿಕೆಟ್ ದರದ ಜೊತೆಗೆ 2% ಸೆಸ್ ಪಾವತಿಸಬೇಕಾಗುತ್ತದೆ. ಉದಾಹರಣೆಗೆ 200 ರೂಪಾಯಿ ಮುಖಬೆಲೆಯ ಟಿಕೆಟ್ಗೆ ಹೆಚ್ಚುವರಿಯಾಗಿ 4 ರೂಪಾಯಿ ಸೆಸ್ ಕಟ್ಟಬೇಕು.
ಸಿನಿಮಾ ಟಿಕೆಟ್ ಮೂಲಕ ಸಂಗ್ರಹವಾಗುವ ಈ ಸೆಸ್ ಹಣವನ್ನು ಸಿನಿಮಾ ಕಾರ್ಮಿಕರ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳಿಗಾಗಿ ಮಾತ್ರ ಬಳಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.


