Wednesday, September 16, 2026
Menu

ಪ್ರದೋಷ್‌ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ್ದು, ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರದೋಷ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಸಿಹೆಚ್ 59 ಕೋರ್ಟ್ ಅಂಗೀಕರಿಸಿದೆ.

ಪ್ರದೋಷ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಟ ದರ್ಶನ್‌ ಮಾಫಿ ಸಾಕ್ಷಿ ತಡೆ ಹಿಡಿಯುವಂತೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ, ವಾದ-ಪ್ರತಿವಾದಗಳನ್ನು ಆಲಿಸಿ ನ್ಯಾಯಾಲಯ ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕರಿಸಿದೆ. ಕೋರ್ಟ್‌ ಪ್ರದೋಷ್‌ಗೆ ಮಾಫಿ ಸಾಕ್ಷಿ ನಿಯಮಗಳನ್ನು ತಿಳಿಸಿದ್ದು, ಶೀಘ್ರದಲ್ಲೇ ದಿನಾಂಕವನ್ನು ಕೂಡ ಪ್ರಕಟಿಸಲಿದೆ.

ಹೈಕೋರ್ಟ್‌ ಸೆಷನ್‌ ಕೋರ್ಟ್‌ಗೆ ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಸಂಬಂಧ ನೀಡಿದ್ದ ಆದೇಶ ಮಾರ್ಪಡಿಸಿ ಹೊಸದಾಗಿ ಆದೇಶ ನೀಡುವಂತೆ ತಿಳಿಸಿತ್ತು, ಅದರನ್ವಯ ಸೆಷನ್‌ ಕೋರ್ಟ್‌ ಹೊಸ ಆದೇಶ ಹೊರಡಿಸಿದೆ.

ಪ್ರದೋಷ್  ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶವನ್ನು ತಡೆಹಿಡಿಯುವಂತೆ ಕೋರಿ ನಟ ದರ್ಶನ್ ಪರ ವಕೀಲರು ಸೆಷನ್ಸ್‌ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಹಶ್ಮತ್ ಪಾಷಾ, ಪ್ರದೋಷ್ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ್ದು, ಬೇರೊಬ್ಬರ ನಂಬರ್ ಹೆಸರಿನಲ್ಲಿ ಎಂಟ್ರಿ ಮಾಡಿಸಿ ಪತ್ನಿಗೆ ಕರೆ ಮಾಡಿದ್ದಾನೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿ ತನಿಖೆ ನಡೆಯುತ್ತಿದೆ. ಜೈಲಿನಿಂದ ಹೊರಬರಲು ಪ್ರದೋಷ್ ಹಲವರ ಜೊತೆ ಸಂಪರ್ಕ ಸಾಧಿಸಿದ್ದಾನೆ. ಈ ಅಕ್ರಮದ ಸಂಪೂರ್ಣ ತನಿಖೆ ಮುಕ್ತಾಯವಾಗುವವರೆಗೂ ಪ್ರದೋಷ್‌ನನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಬಾರದು. ಹೈಕೋರ್ಟ್ ಆದೇಶಕ್ಕೆ ಕಾಲಾವಕಾಶ ಕೋರಿ, ತನಿಖೆ ಪೂರ್ಣಗೊಂಡ ಬಳಿಕ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.

ಇದು ಪ್ರತ್ಯೇಕ ಪ್ರಕರಣ. ಜೈಲು ಮ್ಯಾನುಯಲ್ ಪ್ರಕಾರ ಕೈದಿಗಳಿಗೆ ಮೂರು ನಂಬರ್‌ಗಳಿಗೆ ಕರೆ ಮಾಡಲು ಅವಕಾಶವಿದೆ. ಹೈಕೋರ್ಟ್ ಈಗಾಗಲೇ ಒಂದು ವಾರದೊಳಗೆ ಆದೇಶ ನೀಡುವಂತೆ ನಿರ್ದೇಶಿಸಿದೆ. ಈ ಸಂದರ್ಭದಲ್ಲಿ ದರ್ಶನ್ ಪರ ಸಲ್ಲಿಸಿರುವ ಮೆಮೋಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಹೀಗಾಗಿ ಕಾಲಹರಣ ಮಾಡದೆ ಇಂದೇ ಆದೇಶ ಪ್ರಕಟಿಸಬೇಕು. ಪ್ರದೋಷ್ ಮೇಲಿನ ಈ ಆರೋಪಕ್ಕೂ ಆತ ಮಾಫಿ ಸಾಕ್ಷಿಯಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಹೈಕೋರ್ಟ್ ಆದೇಶದಂತೆ ನ್ಯಾಯಾಲಯ ಮುಂದುವರಿಯಬೇಕು ಎಂದು ಪ್ರದೋಷ್‌ ಪರ ವಕೀಲ ದಿವಾಕರ ವಾದಿಸಿದರು.

Related Posts

Leave a Reply

Your email address will not be published. Required fields are marked *