ವೈಟ್ ಫೀಲ್ಡ್ ಬಳಿಯ ಸಿದ್ದಾಪುರದಲ್ಲಿ ತಾಯಿ-ಮಗಳು ಹೋಗುತ್ತಿದ್ದ ಬೈಕ್ ಮಳೆ ನೀರಲ್ಲಿ ಸ್ಕಿಡ್ ಆಗಿ ರಸ್ತೆಗೆ ಬಿದ್ದ ತಾಯಿ ಮೇಲೆ ಶಾಲಾ ಬಸ್ ಹರಿದು ತೀವ್ರ ಗಾಯಗೊಂಡಿದ್ದ ತಾಯಿ ಕಾಂತಮ್ಮ ಮೃತಪಟ್ಟಿದ್ದಾರೆ.
ಮಗಳು ನೇಹಾ ಸ್ಥಿತಿ ಕೂಡ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈಟ್‌ಫೀಲ್ಡ್ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತಕ್ಕೆ ನರ್ಸಿಂಗ್ ವಿದ್ಯಾರ್ಥಿಗಳಿಬ್ಬರು ಬಲಿ
ಕೆಂಗೇರಿಯ ಆರ್ ಆರ್ ಡೆಂಟಲ್ ಕಾಲೇಜು ಬಳಿ ಬೈಕ್ ರ್ಸತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಬೆಳಗಿನ ಜಾವ ಅಪಘಾತ ನಡೆದಿದ್ದು, ಅತುಲ್ ಹಾಗೂ ಗೌರಿಶಂಕರ್ ಮೃತ ವಿದ್ಯಾರ್ಥಿಗಳು. ಇವರಿಬ್ಬರೂ ಮೈಸೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೃತ ವಿದ್ಯಾರ್ಥಿಗಳು ಕೇರಳದವರು. ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಸಕೋಟೆ ಬಳಿ ನಿಯಂತ್ರಣ ತಪ್ಪಿದ ಕಾರು: ಯುವತಿ ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ದೊಡ್ಡ ಹುಲ್ಲೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಮರ್ಸಿಡಿಸ್ ಬೆಂಜ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಯುವತಿ ಸ್ಥಳದಲ್ಲೇ ಅಸು ನೀಗಿರುವ ಘಟನೆ ನಡೆದಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ.
ಮೃತ ಯುವತಿಯ ಗುರುತು ಪತ್ತೆಯಾಗಿಲ್ಲ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರು ಚಾಲಕನ ಅಜಾಗರೂಕ ಹಾಗೂ ಬೇಜವಾಬ್ದಾರಿ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ, ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


