Saturday, October 10, 2026
Menu

ದುಬಾರೆಯಲ್ಲಿ ಮಹಿಳೆ, ಆನೆ ಸಾವು: ವರದಿ ಕಡೆಗಣಿಸಿ ಬೇಜವಾಬ್ದಾರಿ ತೋರಿದ ಅರಣ್ಯ ಇಲಾಖೆ ಕಾರಣ

ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರದಲ್ಲಿ ಎರಡು ದಿನಗಳ ಹಿಂದೆ ಆನೆಗಳ ನಡುವಿನ ಕಾದಾಟಕ್ಕೆ ಚೆನ್ನೈನ ಪ್ರವಾಸಿ ಮಹಿಳೆ ತುಳಸಿ (33) ಬಲಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಎಂಬ ಸಾಕಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ದುರಂತಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಮತ್ತು ತಜ್ಞರ ವರದಿಯ ಕಡೆಗಣನೆಯೇ ಮುಖ್ಯ ಕಾರಣ ಎಂಬ ಆರೋಪ ಸದ್ದು ಮಾಡುತ್ತಿದೆ.

ಹೈಕೋರ್ಟ್ ಆದೇಶದಂತೆ ವನ್ಯಜೀವಿ ತಜ್ಞ ಕೆ.ಎಂ. ಚಿಣ್ಣಪ್ಪ, ಪಶುವೈದ್ಯ ಸರ್ಜನ್ ಡಾ. ಕಲೈವಣ್ಣನ್ ಮತ್ತು ಮುಖ್ಯ ಪಶುವೈದ್ಯ ಡಾ. ಅಶ್ರಫ್ ಅವರನ್ನೊಳಗೊಂಡ ತಜ್ಞರ ಸಮಿತಿಯು ಕರ್ನಾಟಕದ ಎಲ್ಲಾ ಆನೆ ಶಿಬಿರಗಳಿಗೆ ಭೇಟಿ ನೀಡಿ 2019ರಲ್ಲೇ ಅರಣ್ಯ ಇಲಾಖೆಗೆ ಸಮಗ್ರ ವರದಿ ಸಲ್ಲಿಸಿತ್ತು. ಆದರೆ ಇಲಾಖೆ ಇದನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂಬ ವಿಚಾರ ಮುನ್ನಲೆಗೆ ಬಂದಿದೆ.

ದುಬಾರೆ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಭೇಟಿಯಿಂದಾಗಿ ಆನೆಗಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿವೆ. ಪ್ರವಾಸಿಗರ ಅತಿ ಒಡನಾಟದಿಂದ ಆನೆಗಳ ನಡವಳಿಕೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗುತ್ತಿವೆ ಎಂದು ತಜ್ಞರ ತಂಡ ಚಿತ್ರಸಹಿತ ವರದಿ ನೀಡಿತ್ತು.

ಪ್ರವಾಸಿಗರನ್ನು ಆನೆಗಳ ತೀರಾ ಹತ್ತಿರಕ್ಕೆ ಬಿಡಬಾರದು, ಅವುಗಳಿಂದ ದೂರವಿಡಬೇಕು ಎಂದು ಸಮಿತಿ ಸ್ಪಷ್ಟವಾಗಿ ಹೇಳಿತ್ತು. ಒಂದು ಶಿಬಿರದಲ್ಲಿ ಗರಿಷ್ಠ 15 ಆನೆಗಳಿಗಿಂತ ಹೆಚ್ಚು ಇರಬಾರದು ಎಂದು ಶಿಫಾರಸು ಮಾಡಿತ್ತು. ಆದರೆ ದುಬಾರೆ ಶಿಬಿರದಲ್ಲಿ 30 ಆನೆಗಳನ್ನು ಇರಿಸಲಾಗಿದೆ.

Related Posts

Leave a Reply

Your email address will not be published. Required fields are marked *