ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ನಡೆಸಿದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದ್ದ ದುರುದ್ದೇಶಪೂರಿತ ಹಾಗೂ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದಡಿ ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐ ಆರ್ ದಾಖಲಿಸಿಕೊಂಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ಹಾಗೂ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಪೋಸ್ಟ್‌ಗಳನ್ನು ಮಾಡಲಾಗಿತ್ತು. ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ ಬಳಕೆದಾರರ ವಿವರಗಳನ್ನು ನೀಡುವಂತೆ ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಘಟಕದ ಇಂಟೆಲಿಜೆನ್ಸ್ ಫ್ಯೂಷನ್ ಅಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್ ವಿಭಾಗ ಪ್ರಕರಣ ದಾಖಲಿಸಿಕೊಂಡಿದ್ದು, ಕ್ರಿಮಿನಲ್ ಬೆದರಿಕೆ, ಸಾರ್ವಜನಿಕರಲ್ಲಿ ಆತಂಕ, ಗೊಂದಲ ಸೃಷ್ಟಿಸುವ ಕೃತ್ಯ ಹಾಗೂ ಮಾನಹಾನಿ ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.
ಪೊಲೀಸರು ಎಕ್ಸ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ನೀಡಿ, ವಿವಾದಿತ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ತಕ್ಷಣ ಅಳಿಸುವಂತೆ ಸೂಚಿಸಿದ್ದಾರೆ. ಆ ಪೋಸ್ಟ್‌ಗಳನ್ನು ಪ್ರಕಟಿಸಿದ ಖಾತೆಗಳ ನೋಂದಣಿ ವಿವರಗಳನ್ನು ಒದಗಿಸುವಂತೆ ಆದೇಶಿಸಿದ್ದಾರೆ.
ನೋಟಿಸ್‌ನಲ್ಲಿ ಸಂಬಂಧಿತ ಎಕ್ಸ್ ಖಾತೆದಾರರ ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಸೇರಿದಂತೆ ಎಲ್ಲಾ ನೋಂದಣಿ ಮಾಹಿತಿಯನ್ನು ನೀಡುವಂತೆ ಕೇಳಲಾಗಿದೆ.
ಖಾತೆಯ ಲಾಗಿನ್ ಮತ್ತು ಲಾಗ್‌ಔಟ್ ಸಮಯದ ವಿವರಗಳು , ಐಪಿ ಸಂಬಂಧಿತ ಮಾಹಿತಿ ಹಾಗೂ ತನಿಖೆಗೆ ನೆರವಾಗುವ ಇತರ ಮಾಹಿತಿಯನ್ನೂ ಸಲ್ಲಿಸುವಂತೆ ಪೊಲೀಸರು ಕೋರಿದ್ದಾರೆ.
ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮದ ಬಳಿಕ ಹಾಗೂ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಪದಗಳನ್ನು ಬಳಸಿರುವ ಪೋಸ್ಟ್‌ಗಳು ಪ್ರಕಟವಾಗಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸುವ ಅಥವಾ ಆಕ್ಷೇಪಾರ್ಹ ವಿಷಯಗಳು ಕಂಡುಬಂದ ತಕ್ಷಣ ಸಂಬಂಧಿತ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ನೋಟಿಸ್ ನೀಡಿ, ಅವುಗಳನ್ನು ತೆಗೆದುಹಾಕುವಂತೆ ಸೂಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಆಕ್ಷೇಪಾರ್ಹ ವಿಷಯಗಳನ್ನು ಗುರುತಿಸಲು ಸೈಬರ್ ಹಾಗೂ ಸಾಮಾಜಿಕ ಜಾಲತಾಣ ಮೇಲ್ವಿಚಾರಣಾ ತಂಡಗಳು ನಿಗಾ ಮುಂದುವರಿಸಿವೆ.


