Menu

ಚಿತ್ರದುರ್ಗ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ: ಆ‌ರ್‌ ಅಶೋಕ 

ಚಿತ್ರದುರ್ಗ ಜಿಲ್ಲೆಯಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಚಿತ್ರದುರ್ಗ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ ರೈತರಿಗೆ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹಿರಿಯೂರು ತಾಲೂಕಿನ ಸೂರಗೊಂಡನಹಳ್ಳಿಯಲ್ಲಿ ಸೂರ್ಯಕಾಂತಿ ಬೆಳೆಯ ಹೊಲಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ವೀಕ್ಷಣೆ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ಒಂದು ರೈತ ಕುಟುಂಬಕ್ಕೆ ಸೇರಿದ 13 ಎಕರೆಯಲ್ಲಿರುವ ಸೂರ್ಯಕಾಂತಿ ಬೆಳೆ ನಷ್ಟವಾಗಿದೆ. ಮಳೆ ಬರದೆ 55 ದಿನವಾಗಿದ್ದು ಬೆಳೆ ಒಣಗಿದೆ. ಇನ್ನೂ ಮಳೆ ಬಂದರೂ ಬೆಳೆ ಫಸಲು ಸಿಗುವುದಿಲ್ಲ. ಈ ಭಾಗದಲ್ಲಿ ಜೋಳ, ಶೇಂಗಾ ಕೂಡ ಇದೆ. ಈ ರೈತರು ಬೇಸರಗೊಂಡು ಒಂದು ತಿಂಗಳಿಂದ ಜಮೀನಿಗೆ ಭೇಟಿ ನೀಡಿಲ್ಲ. ಅಧಿಕಾರಿಗಳು ಈ ಕಡೆ ಬಂದಿಲ್ಲ‌. ವಿಮೆಯ ಬಗ್ಗೆ ಅಧಿಕಾರಿಗಳು ಪ್ರಚಾರ ಮಾಡಿಲ್ಲ ಎಂದರು.

ನಾನು ಕಂದಾಯ ಸಚಿವನಾಗಿದ್ದಾಗ ಬರ ಘೋಷಣೆಯಾದ ಒಂದು-ಎರಡು ತಿಂಗಳಲ್ಲಿ ಪರಿಹಾರ ಕೊಡಿಸಿದ್ದೇನೆ‌. ಈಗ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡದೆ ತಾನಾಗಿಯೇ ಪರಿಹಾರ ನೀಡಬೇಕು. ಮುಖ್ಯಮಂತ್ರಿ ಒಂದು ಕಡೆ ಕಾಟಾಚಾರಕ್ಕೆ ಭೇಟಿ ನೀಡಿ ಸಭೆ ಮಾಡಿದ್ದಾರೆ. ಈ ಸಮಯದಲ್ಲಿ ಸಚಿವ ಸಂಪುಟ ರಚನೆಗೆ ಒತ್ತು ನೀಡುವ ಬದಲು ರೈತರ ಕಷ್ಟ ಆಲಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರದಿಂದ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಚಿತ್ರದುರ್ಗದಲ್ಲಿ ಭೀಕರವಾದ ಬರ ಬಂದಿದೆ. ಇಷ್ಟಾದರೂ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಣೆ ಮಾಡಿಲ್ಲ. ಬರ ಘೋಷಣೆ ಮಾಡದೆ ಕೇಂದ್ರ ಸರ್ಕಾರ 10,000 ಕೋಟಿ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರ ಹೇಳುತ್ತಿದೆ. ಎಸ್ ಡಿಆರ್ ಎಫ್ ನಲ್ಲಿ ಮೂರು ವರ್ಷದಿಂದ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಲೆಕ್ಕ ಕೊಡಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಕೃಷಿ ಭೂಮಿ ಇದ್ದು , 60,000 ಎಕರೆಯಲ್ಲಿ, ಶೇ.19  ಮಾತ್ರ ಬಿತ್ತನೆ ನಡೆದಿದೆ. ನೀರು ಬೀಳದೆ ನೆಲ ಬಿರುಕು ಬಿಟ್ಟಿದ್ದರೂ ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ದೆಹಲಿಗೆ ಹೋಗಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಲು ಸಾಧ್ಯವಾಗುತ್ತದೆ. ಹಿಂದಿನ ಬಿಜೆಪಿ ಅವಧಿಯಲ್ಲಿ ಎಲ್ಲ ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಪರಿಹಾರ ಘೋಷಣೆ ಮಾಡಿದ್ದರು. ಆದರೆ ಈವರೆಗೆ ಕಾಂಗ್ರೆಸ್ ಪರಿಹಾರ ಘೋಷಿಸಿಲ್ಲ. ನಾನು ನಾಲ್ಕು ವರ್ಷ ಕಂದಾಯ ಸಚಿವನಾಗಿದ್ದಾಗ ದುಪ್ಪಟ್ಟು ಪರಿಹಾರ ನೀಡಿದ್ದೆ. ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿ ಸಂಪೂರ್ಣ ಊಟ ನೀಡಲು ಕ್ರಮ ವಹಿಸಿದ್ದೆ. ಆದರೆ ಈವರೆಗೆ ಗೋಶಾಲೆ ತೆರೆದಿಲ್ಲ. ಮೇವು ಸಂಗ್ರಹ ಕೂಡ ಮಾಡಿಲ್ಲ. ಜಿಲ್ಲಾಧಿಕಾರಿಗಳು ಎಲ್ಲಿ ಎಷ್ಟು‌ ಮಳೆ, ಹಾನಿ ಎಂಬ ಅಂದಾಜನ್ನು ಹೇಳುತ್ತಿದ್ದಾರೆಯೇ ಹೊರತು ನಿಖರವಾದ ಅಂಕಿ ಅಂಶ ಲಭ್ಯವಿಲ್ಲ ಎಂದರು.

ಈ ಬಾರಿ ಎಲ್ ನಿನೊ ಪರಿಣಾಮವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಎಲ್ಲ ಖಾತೆಗಳನ್ನು ಹಂಚಿಕೆ ಮಾಡಿದ್ದರೂ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಹೊಣೆಯನ್ನು ಯಾರಿಗೂ ನೀಡಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ಹಿಂದೂ ಎಂದು ಸಾಬೀತುಪಡಿಸಲು ದೇವಾಲಯಗಳನ್ನು ಸುತ್ತುತ್ತಿದ್ದಾರೆ. ಬರ ಸಮೀಕ್ಷೆಯಲ್ಲಿ, ರೈತರ ಸಂಕಷ್ಟ ಆಲಿಸುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ. ಒಂದು ತಾಲೂಕಿಗೆ ಒಂದು ಕೋಟಿ ರೂ. ನೀಡಲಾಗುವುದೆಂದು ಹೇಳಿದ್ದಾರೆ. ಇಲ್ಲಿ ಒಂದು ತಾಲೂಕಿನಲ್ಲಿ 300 ಹಳ್ಳಿಗಳಿದ್ದು, ಒಂದು ಹಳ್ಳಿಯಲ್ಲಿ ಬೋರ್ ವೆಲ್ ಕೊರೆಸಲು 10 ಲಕ್ಷ ರೂ. ಬೇಕಾಗುತ್ತದೆ. ಕನಿಷ್ಠ 50 ಕೋಟಿ ರೂ. ಕೊಡಬೇಕಿತ್ತು ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ 5,000 ಕೋಟಿ ರೂ. ಬಾಕಿ ಇದೆ. ಪಿಂಚಣಿ, ಅನ್ನಭಾಗ್ಯದ ಹಣ ಬಾಕಿ ಇದೆ. ಭಿಕ್ಷುಕರ ಕಾಲೋನಿಗೆ 90 ಕೋಟಿ ರೂ. ಬಾಕಿ ಇದೆ. ಖಜಾನೆ ಖಾಲಿಯಾಗಿರುವುದರಿಂದ‌ ಪರಿಹಾರ ನೀಡಲು ಸಾಧ್ಯವಾಗದೆ ಬರ ಘೋಷಿಸುತ್ತಿಲ್ಲ. ರೈತರು ಶೇಂಗಾ, ಸೂರ್ಯಕಾಂತಿ ಮೊದಲಾದ ಬೀಜಗಳನ್ನು ಖರೀದಿಸಿ ವಾಪಾಸ್ ಮಾಡುತ್ತಿದ್ದಾರೆ. ಮರಳಿ ಬರುವ ಹಣದಿಂದಾದರೂ ಬದುಕು ನಡೆಸುವ ಸ್ಥಿತಿ ಬಂದಿದೆ ಎಂದರು.

ಬರಗಾಲ, ಕಾವೇರಿ ನೀರು ಹಂಚಿಕೆ ವಿಷಯಗಳ ಬಗ್ಗೆ ನಿಲುವಳಿ ಸೂಚನೆಯಲ್ಲಿ ಮಾತನಾಡಿ ಸರ್ಕಾರಕ್ಕೆ ಚಳಿ ಬಿಡಿಸುತ್ತೇ‌ನೆ.‌ ಸಿಎಂ ಬದಲಾವಣೆಯಿಂದ ಏನೋ ಸುಧಾರಣೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಇದು ಚಿನ್ನದ ನಾಡಾಗಲಿದೆ ಎನ್ನಲಾಗಿತ್ತು. ಆದರೆ ಎರಡು ತಿಂಗಳಿಂದ ಲಂಚಾವತಾರ, ಅಧಿಕಾರಿಗಳ ಸೋಮಾರಿತನ, ಪ್ರವಾಸ ಮಾಡದ ಸಚಿವರು, ನಡೆಯದ ಕುಂದುಕೊರತೆ ಸಭೆ ಹೀಗೆ ಅನೇಕ ಸಮಸ್ಯೆಗಳು ಕಾಣುತ್ತಿವೆ ಎಂದು ವಿವರಿಸಿದರು.

ಬಿಜೆಪಿ ವತಿಯಿಂದ ಎಲ್ಲ ಕಡೆ ಬರ ಅಧ್ಯಯನ ಮಾಡಲಾಗುತ್ತಿದೆ. ರೈತರ ಆತ್ಮಹತ್ಯೆ ಹೆಚ್ಚಿದೆ. ಆದರೆ ಬಿಜೆಪಿ ರೈತರ ಜೊತೆ ಇರಲಿದ್ದು, ಬೇಗ ಪರಿಹಾರ ಕೊಡಿಸುತ್ತೇವೆ ಎಂದರು.

ಕಾವೇರಿ ನೀರನ್ನು ಬರಿದು ಮಾಡುವ ಹುನ್ನಾರಕ್ಕೆ ರಾಜ್ಯ ಸರ್ಕಾರವೇ ಕಾರಣ. ಸರಿಯಾಗಿ ವಾದ ಮಂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿಗಳು ನಾಲ್ಕು ಬಾರಿ ದೆಹಲಿಗೆ ಹೋಗಿದ್ದಾರೆಯೇ ಹೊರತು, ವಾದ ಮಂಡನೆ ಬಗ್ಗೆ ಸಭೆ ಮಾಡಿಲ್ಲ. ವಕೀಲರಿಗಾಗಿ 300 ಕೋಟಿ ರೂ. ಖರ್ಚು ಮಾಡಲಾಗಿದೆ. ಸಿಎಂಗೆ ಆಸಕ್ತಿ ಇದ್ದಲ್ಲಿ ಸರ್ವಪಕ್ಷ ಸಭೆ ಕರೆದು ಏನು ಕ್ರಮ ಮಾಡಬೇಕೆಂದು ಸಲಹೆ ಪಡೆಯಬೇಕಿತ್ತು. ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಕೈಗೊಂಡಾಗಲೇ ಅಧಿವೇಶನ ಕರೆದು ತೀರ್ಮಾನ ಮಾಡಬಹುದಿತ್ತು. ಹೈಕಮಾಂಡ್ ಮರ್ಜಿಗಾಗಿ ತಮಿಳುನಾಡಿಗೆ ನೀರು ಹರಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಇಲ್ಲಿ ಸಭೆ ಮಾಡಿ ನಂತರ ಒಪ್ಪಿಗೆ ಕೊಡಲ್ಲ ಹಾಗೂ ಹನಿ ನೀರು ಕೂಡ ಬಿಡಲ್ಲ ಎನ್ನುವುದು ಖಚಿತ. ಅಲ್ಲಿನ ಸಿಎಂ ಇಲ್ಲಿಗೆ ಬಂದು ರಾಜ್ಯದ ವಿರುದ್ಧ ಮಾತಾಡಲು ವೇದಿಕೆ ಸಿದ್ಧಪಡಿಸಿಕೊಡಲಾಗುತ್ತಿದೆ ಎಂದರು.

ಈ ಶಿಫಾರಸಿನಲ್ಲಿ ಸಂಕಷ್ಟ ಸೂತ್ರವನ್ನು ಉಲ್ಲೇಖಿಸಿಲ್ಲ. ಕೆಆರ್ ಎಸ್ ಗೇಟುಗಳನ್ನು ಹಿಂದೆ ಬಿಜೆಪಿ ಅವಧಿಯಲ್ಲಿ ಸರಿಪಡಿಸಲಾಗಿತ್ತು. ಎಲ್ಲ ಜಲಾಶಯಗಳಲ್ಲಿ ಹೂಳು ತುಂಬಿದ್ದು, ಅದನ್ನು ಸ್ವಚ್ಛ ಮಾಡಲು ಹೆಚ್ಚು ಅನುದಾನ ಬೇಕಾಗುತ್ತದೆ‌. ಇವೆಲ್ಲವೂ ಸಮಿತಿಯ ಮುಂದೆ ಚರ್ಚೆಯಾಗಿರುತ್ತದೆ ಎಂದು ಕಿಡಿ ಕಾರಿದರು.

ಬಾಂಗ್ಲಾ ಜನರನ್ನು ಓಡಿಸಲು ಎಸ್ ಐಆರ್

ಬಾಂಗ್ಲಾ ಪ್ರಜೆಗಳು ಎಲ್ಲ ಜಿಲ್ಲೆಗಳಲ್ಲಿ ಇದ್ದಾರೆ‌. ಅವರನ್ನು ಹೊರಕ್ಕೆ ಕಳಿಸಲು ಎಸ್ಐಆರ್ ಮಾಡಲಾಗುತ್ತಿದೆ. ಕೋಗಿಲು ಕ್ರಾಸ್ ನಲ್ಲಿ ನಾವು ಹೋರಾಟ ಮಾಡಿದ್ದರಿಂದಾಗಿಯೇ ಅವರಿಗೆ ಮನೆ ನೀಡುವ ತೀರ್ಮಾನದಿಂದ ಕಾಂಗ್ರೆಸ್ ಹಿಂದೆ ಸರಿದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಅಕ್ರಮ ವಾಸಿಗಳನ್ನು ವಾಪಸ್ ಕಳಿಸುತ್ತೇವೆ. ಇವರನ್ನು ಹೊರಗೆ ಹಾಕದೇ ಇದ್ದರೆ ಭಯೋತ್ಪಾದನೆ ಹೆಚ್ಚಲಿದೆ. ಹಣದಾಸೆಗಾಗಿ ಕೆಲವರು ಅವರಿಗೆ ವಾಸ ಮಾಡಲು ಅವಕಾಶ ನೀಡುತ್ತಿದ್ದು, ಈ ಜಾಲ ದೊಡ್ಡದಿದೆ ಎಂದರು.

ಪರಿಜ್ಞಾನವಿಲ್ಲದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ದಿಢೀರನೆ ಓಡುತ್ತಾರೆ. ಅವರ ಟೀಕೆಗಳಿಗೆ ಸಂಸತ್ತಿನಲ್ಲೇ ಉತ್ತರ ಸಿಕ್ಕಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *