Friday, September 25, 2026
Menu

ರೈತ ಇಡೀ ಜಗತ್ತಿನ ಪ್ರತಿನಿಧಿ, ಪ್ರಧಾನಿ ರೈತರ ಆದಾಯ ಡಬಲ್ ಮಾಡಲಿಲ್ಲ: ಡಿಕೆ ಶಿವಕುಮಾರ್

ಪ್ರಧಾನಿ ದೇಶದ ಪ್ರತಿನಿಧಿ, ಮುಖ್ಯಮಂತ್ರಿ ರಾಜ್ಯದ ಪ್ರತಿನಿಧಿ, ಶಾಸಕ ಕ್ಷೇತ್ರದ ಪ್ರತಿನಿಧಿ, ರೈತ ಇಡೀ ಜಗತ್ತಿನ ಪ್ರತಿನಿಧಿ ಹೀಗಾಗಿ ವೈದ್ಯರಿಗೆ ಡಿಆರ್, ಶಿಕ್ಷಕರಿಗೆ ಟಿಆರ್, ಎಂಜಿನಿಯರ್ ಗಳಿಗೆ ಇಆರ್ ಪದನಾಮ ನೀಡಿದಂತೆ ರೈತರ ಹೆಸರಿನ ಮೊದಲು ಪದನಾಮ ನೀಡುವ ಬಗ್ಗೆ ಆಲೋಚನೆಯಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರು  ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು. ರೈತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನೀರಿಗೆ ಕಷ್ಟವಿದ್ದರು ಒಬ್ಬನೇ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರ ಆತ್ಮ ಸ್ಥೈರ್ಯ ಅನುಕರಣೀಯ. ಹೊಸಕೋಟೆ ರೈತರು ಬಂದಿದ್ದರು. ಆ ಭಾಗದಲ್ಲಿ ಕಡಿಮೆ ಜಮೀನಿನಲ್ಲಿ ಹೂ, ತರಕಾರಿ ಬೆಳೆಯುತ್ತಾರೆ. ಬಿಜಾಪುರ, ಬಾಗಲಕೋಟೆ ಕಡೆ ದ್ರಾಕ್ಷಿ ಬೆಳೆಯುತ್ತಿದ್ದಾರೆ.‌ ಜೊತೆಗೆ ಈಗ ರೇಷ್ಮೆ ಕೂಡ ಬೆಳೆಯುತ್ತಿದ್ದಾರೆ. ನನ್ನ ಕ್ಷೇತ್ರದ ಕನಕಪುರ, ರಾಮನಗರ, ಚನ್ನಪಟ್ಟಣ, ಶಿಡ್ಲಘಟ್ಟದ ರೈತರು ರೇಷ್ಮೆ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಅನ್ನ ದೇವರ ಮುಂದೆ ಇನ್ನು ದೇವರುಗಳು ಇಲ್ಲ. ಅನ್ನದಾತನಿಗೆ ಸರಿಸಾಟಿ ಯಾರೂ ಇಲ್ಲ. ಕರ್ಮವೇ ರೈತನ ಧರ್ಮ, ಶ್ರಮವೇ ಶಕ್ತಿ, ಅನ್ನವೇ  ಅರ್ಪಣೆ, ಹಸಿವು ತೀರಿಸುವುದೇ ಯಜ್ಞ. ಮಣ್ಣಿಗೆ ಕೊಟ್ಟದ್ದು ಬೆಳೆಯಾಗಿ ಬರುತ್ತದೆ. ರೈತನಿಗೆ ಕೊಟ್ಟದ್ದು ಬದುಕಾಗಿ ಬರುತ್ತದೆ. ರೈತನ ಬದುಕನ್ನು ನಾವೆಲ್ಲರೂ ಸೇರಿ ಗಟ್ಟಿಗೊಳಿಸಬೇಕುಎಂದು ಹೇಳಿದರು. ದೇಶದ ಗಡಿ ಸೈನಿಕ ಕಾಯುತ್ತಾನೆ. ಜನರ ಬದುಕನ್ನು ರೈತ ಕಾಯುತ್ತಾನೆ. ಹೊಲ ಉಳಬೇಕು, ಗೊಬ್ಬರ ಹಾಕಿ ಬಿತ್ತನೆ ಮಾಡಿ, ಕಟಾವು ಮಾಡುವವನು ನಿಜವಾದ ರೈತ. ಹಸಿರು ಶಾಲು ಹಾಕುವವರೆಲ್ಲಾ ರೈತರಲ್ಲ ಎಂದರು.

ಕೃಷಿಯೇ ರೈತನ ಧರ್ಮ. ಶ್ರಮ ರೈತನ ಶಕ್ತಿ. ಆತನ ಬದುಕು ಸಮಾಜಕ್ಕೆ ಸರ್ಪಣೆ. ಹಸಿವನ್ನು ನಿವಾರಣೆ ಮಾಡು ಯಜ್ಞ ಮಾಡುತ್ತಿದ್ದಾನೆ. ವ್ಯವಸಾಯದ ಬದುಕು  ನಿರಂತರ. ನೇಗಿಲು ಹಿಡಿದು ಉಳುಮೆ ಮಾಡುವ ರೈತನಿಗೆ ಯಾವುದೇ ಅಳತೆ ಕೋಲುಗಳು ಬೇಡ. ಎಂಜಿನಿಯರ್ ಗಳಿಗಿಂತ ಅಚ್ಚುಕಟ್ಟಾಗಿ ಗೆರೆ ಎಳೆದಂತೆ ಇರುತ್ತದೆ. ಮಹಿಳೆಯರು ಪೈರು ನಾಟಿ ಮಾಡುವಾಗಲೂ ಅಚ್ಚುಕಟ್ಟಾಗಿ ಮಾಡಿರುತ್ತಾರೆ. ದೇಶಕ್ಕೆ ವಿದ್ಯಾವಂತರು, ಬುದ್ಧಿವಂತರು ಇಲ್ಲದೇ ಇದ್ದರೂ ನಡೆಯುತ್ತದೆ. ಪ್ರಜ್ಞಾವಂತರು ಇರಬೇಕು. ಆ ಪ್ರಜ್ಞಾವಂತಿಕೆ ರೈತರಲ್ಲಿ ಜಾಸ್ತಿಯಿದೆ ಎಂದು ಬಣ್ಣಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕಾವೇರಿ ನೀರು ಬಿಡಿ ಎಂದು ನ್ಯಾಯಾಲಯ ಕೂಡ ಸೂಚಿಸಿದೆ. ಮಂಡ್ಯ ರೈತರು ನಮಗೆ ಹೊಡೆಯುವುದು ಬಾಕಿ. ಅವರಿಗೂ ಪರಿಸ್ಥಿತಿ ಅರ್ಥವಾಗಿದೆ. ನೋಡಿಕೊಂಡು ಬೆಳೆ ಹಾಕಿ ಅಂತ ಹೇಳಿದೆ. ಆದರೂ, ಯಾರೂ ತಾಳ್ಮೆ ಕಳೆದುಕೊಂಡಿಲ್ಲ. ಆಂಧ್ರದವರು ತೆಲಂಗಾಣದವರು ಕುಡಿಯಕ್ಕೂ ನೀರಿಲ್ಲ ಅಂತಿದ್ದಾರೆ ಎಂದರು.

ಕಳೆದ ತಿಂಗಳು ಅಧಿವೇಶನ ಕರೆದಿದ್ದೆ ಚರ್ಚೆ ಮಾಡಲಿಲ್ಲ. 27ನೇ ತಾರಿಖು ಕಸ್ತೂರಿ ರಂಗನ್ ವರದಿ ಬಗ್ಗೆ ಸರ್ಕಾರದ ಅಭಿಪ್ರಾಯ ತಿಳಿಸಬೇಕು. ನಾವೇ ಕುಳಿತುಕೊಂಡು ನಮ್ಮ ಅಭಿಪ್ರಾಯ ಹೇಳಬಹುದಿತ್ತು. ಆ ಕೆಲಸ ಮಾಡಲಿಲ್ಲ. ಕರಾವಳಿ, ಮಲೆನಾಡಿಗೆ ಭೇಟಿ ಕೊಟ್ಟು ಜನರ ಮಾತುಗಳನ್ನು ಆಲಿಸಿದ್ದೇನೆ. ನೂರಾರು ವರ್ಷಗಳಿಂದ ಕಾಡಿನ ಜೊತೆ ಬದುಕುತ್ತಿದ್ದಾರೆ. ಅಲ್ಲಿ ಅವರ ಜಮೀನು ಇದೆ.  ಪರಿಸರ ಉಳಿಬೇಕು. ರೈತರ ಆಸ್ತಿ ಹಕ್ಕು ಅವರಲ್ಲೇ ಉಳೀಬೇಕು. ಈ ಬದ್ಧತೆ ನಮ್ಮ ಸರ್ಕಾರಕ್ಕೆ ಇದೆ. ತಮಿಳುನಾಡಿನವರಿಗೂ ಮೇಕೆದಾಟು ಅಣೆಕಟ್ಟಿನ ಬಗ್ಗೆ ಮನವರಿಕೆಯಾಗಿದೆ.‌ ಸುಪ್ರೀಂಕೋರ್ಟ್ ಸಹ ನಮ್ಮ ಪರವಾಗಿ ತೀರ್ಪು ನೀಡಿದೆ ಎಂದು ತಿಳಿಸಿದರು.

ಅರಣ್ಯ ಭೂಮಿ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಅನೇಕ ರೈತಪರ ಕಾನೂನುಗಳನ್ನು ನಾವು ಜಾರಿ ಮಾಡಿದ್ದೇವೆ. ಈಗ ತೇಗ ಸಿರಿ ಯೋಜನೆ ಮೂಲಕ ಜಮೀನಿನ ರೈತನಿಗೆ ಆದಾಯ ಸಿಗುವ ಆಲೋಚನೆ ಮಾಡಿದ್ದೇವೆ. ರಸ್ತೆ ಇಕ್ಕೆಲಗಳ ಜಮೀನಿನಲ್ಲಿ ರೈತನೇ ತೇಗದ ಗಿಡ ನೆಟ್ಟು ಮರವಾಗಿಸಿದರೆ, ಆದಾಯದಲ್ಲಿ ಶೇ70ರಷ್ಟು ರೈತನಿಗೆ, 30ರಷ್ಟು ಸರ್ಕಾರ ಪಡೆಯಲಿದೆ. ಈ ರೀತಿ ಅರಣ್ಯ ಇಲಾಖೆ ರೈತನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ರಾಜ್ಯಕ್ಕೆ ಆಸ್ತಿ, ರೈತನಿಗೆ ಸಂಪತ್ತಾಗುತ್ತದೆ. ಜಿಲ್ಲೆಗೆ ಎರಡೆರಡು ತಾಲೂಕಿನಂತೆ ನೇಗಿಲಯೋಗಿ ಯೋಜನೆ ಮೂಲಕ ಸಣ್ಣ ರೈತರ ಭೂಮಿಯನ್ನು ಸರ್ಕಾರವೇ ಉಳುಮೆ ಮಾಡಿಕೊಡುವ ಯೋಜನೆಯನ್ನು ರೂಪಿಸಿದ್ದೇವೆ ಎಂದರು.

ರೈತನ ಹೊಲ ತುಂಬಿದರೆ ಮಾತ್ರ ಪ್ರತಿ ಮನೆಯ ಒಲೆ ಉರಿಯುತ್ತದೆ. ನಾವು ತಿನ್ನುವ ಅನ್ನದ ಮೇಲೆ ಕೃಷಿಕರ ಕಾರ್ಮಿಕರ ಬೆವರಿದೆ. ಬೆಲೆ ಗಗನಕ್ಕೆ ಹೋಗಿದೆ. ನೀರಿನ ಬೆಲೆ ಹಾಲಿನ ಬೆಲೆ ಅಷ್ಟೇ ಆಗಿದೆ. ತಮಿಳುನಾಡಲ್ಲಿ 10ರೂ. ಜಾಸ್ತಿ ಮಾಡಿದ್ದಾರೆ. ಸಭೆ ಕರೆದು ತಿ ಮಾಹಿತಿ ಪಡೆಯುತ್ತೇನೆ.  ಮಂಡ್ಯ ಸೇರಿದಂತೆ ವಿವಿಧೆಡೆ 4-5 ಕೃಷಿ ಕಾಲೇಜುಗಳು, ಪಶು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭ ಮಾಡಲು ಅನುಮತಿ ನೀಡಿದ್ದೇವೆ ಎಂದರು.

ಆಧುನಿಕ ಕೃಷಿಯಲ್ಲಿ ಡ್ರೋಣ್ ಬಳಕೆ, ರೈತರಿಗೆ ವೈಜ್ಞಾನಿಕ ಸಲಹೆ ನೀಡುವುದು. ಎಐ ತಂತ್ರಜ್ಞಾನ ಬಳಸುವ ಸಲುವಾಗಿ ರೈತರಿಗಾಗಿಯೇ 5-6 ಯೋಜನೆಗಳನ್ನು ರೂಪಿಸಿದ್ದೇವೆ. ಎಲ್ಲರೂ ಬೆಳೆದದ್ದೇ ಬೆಳೆಯುವುದನ್ನು ತಪ್ಪಿಸಲು ತಂತ್ರಜ್ಞಾನ ಬಳಸುವ ಬಗ್ಗೆ ಚಿಂತನೆ ಮಾಡಿದ್ದೇವೆ. ರೈತರೂ ಹೊಸ ತಂತ್ರಜ್ಞಾನ ಅಳವಡಿಕೆ ಬಗ್ಗೆ ಗಮನಹರಿಸಬೇಕು. ಬೆಂಗಳೂರಿಂದ ಹಣ್ಣು, ಹೂವು ವಿದೇಶಕ್ಕೆ ರಫ್ತಾಗುತ್ತಿವೆ. ಇಂಥ ರೈತರಿಗೆ ವಿದ್ಯುಚ್ಛಕ್ತಿ ರಿಯಾಯಿತಿ, ದಾಸ್ತಾನುಗಳನ್ನು ಹೆಚ್ಚಿಸಿ ನೆರವು ನೀಡುವ ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಮೋದಿಯವರು ರೈತರ ಆದಾಯ ಡಬಲ್ ಮಾಡುತ್ತೇನೆ ಎಂದು ಹೇಳಿದ್ದರು. ಡಬಲ್ ಮಾಡಲು ಸಾಧ್ಯವಾಗಲಿಲ್ಲ. ರೈತ ವಿರೋಧಿ ಕಾಯ್ದೆಗಳನ್ನು ತಂದರು. ರೈತರು ಹೋರಾಟ ಮಾಡಿ ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಮಾಡಿದರು. ಈಗ ನಮ್ಮ ಸರ್ಕಾರ 1,200 ಕೋಟಿ ಹಣವನ್ನು ರೈತರಿಗಾಗಿ ನೀಡುತ್ತಿದೆ. ರೈತರ ಹಿತಕ್ಕಾಗಿ ಅರಣ್ಯ ಅಂಚಿನ ರೈತರಿಗೆ ನೋಟಿಸ್ ನೀಡದಂತೆ ತಿಳಿಸಿದ್ದೇನೆ. ನಾನೂ ರೈತನ ಮಗ.  ರೈತರನ್ನು ಕಾಪಾಡುವ ಹೊಣೆ ನಮ್ಮದು ಎಂದು ಸಿಎಂ ತಿಳಿಸಿದರು.

ವಿಜಯ ಕರ್ನಾಟಕದವರು ರೈತರನ್ನು ಸೂಪರ್ ಸ್ಟಾರ್ ಎಂದಿದ್ದಾರೆ. ಯುದ್ಧ ನಡೆಯಲಿ, ಸರ್ಕಾರಗಳು ಬದಲಾಗಲಿ, ಚುನಾವಣೆಗಳು ನಡೆಯುತ್ತಾ ಇರಲಿ ರೈತ ವಿಶ್ರಾಂತಿ ಪಡೆಯುವುದಿಲ್ಲ. ಕೊರೋನಾ ಸಮಯದಲ್ಲಿ ರೈತರು ಬೆಳೆದ ಬೆಳೆ ಹಾಳಾಗಬಾರದು ಎಂದು ಖರೀದಿ ಮಾಡಿ ಮನೆ,‌ ಮನೆಗೆ ಹಂಚಿದ್ದೆ ಎಂದು ನೆನಪಿಸಿಕೊಂಡರು. ಸಿರಿ ಧಾನ್ಯಗಳಿಗೆ ಈಗ ಒಳ್ಳೆ ಮಾರುಕಟ್ಟೆ ಇದೆ. ಕರ್ನಾಟಕ ರಾಗಿ, ಕಾಫಿ, ಸೂರ್ಯಕಾಂತಿ, ಅಡಕೆ, ಟೊಮ್ಯಾಟೊ, ಮೆಣಸಿನಕಾಯಿ, ತೆಂಗಿನಕಾಯಿ, ದಾಳಿಂಬೆ, ಅನಾನಸ್ ಹೀಗೆ ಎಲ್ಲಾ ಮಾದರಿ ಕೃಷಿಯಲ್ಲಿ ನಾವು ಮುಂದಿದ್ದೇವೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *