ಉದಯಕಾಲ ನ್ಯೂಸ್, ವಿಜಯಪುರ: ಪ್ರತಿ ಟನ್ ಕಬ್ಬಿಗೆ ಕನಿಷ್ಠ . ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲೆಯಲ್ಲಿ ರೈತರು ಉಗ್ರ ಹೋರಾಟಕ್ಕೆ ಇಳಿದಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರುವವರೆಗೂ ಜಿಲ್ಲೆಯ ಯಾವುದೇ ಸಕ್ಕರೆ ಕಾರ್ಖಾನೆಗಳನ್ನು ಕಾರ್ಯಾರಂಭ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ರೈತರು, ಜಿಲ್ಲೆಯ ಎಲ್ಲಾ 10 ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿದು ತಮ್ಮ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಕ್ಕರೆ ಗೋದಾಮುಗಳಿಗೆ ಬೀಗ ಹಾಕಿದ ಆಕ್ರೋಶಿತ ರೈತರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚೂನಪ್ಪ ಪೂಜಾರಿ ಬಣ) ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಗಿದ್ದು, ರೈತರು ಕಾರ್ಖಾನೆಗಳ ಆವರಣದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಕೇವಲ ಕಾರ್ಖಾನೆಗಳ ಆರಂಭವಷ್ಟೇ ಅಲ್ಲದೆ, ಕಾರ್ಖಾನೆಗಳ ಸಕ್ಕರೆ ಗೋದಾಮುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಿರುವ ರೈತರು, “ನಮಗೆ ನ್ಯಾಯ ಸಿಗುವವರೆಗೆ ಮತ್ತು ಕಬ್ಬಿನ ದರ ನಿಗದಿಯಾಗುವವರೆಗೆ ಇಲ್ಲಿಂದ ಒಂದು ಚೀಲ ಸಕ್ಕರೆಯೂ ಹೊರಗೆ ಹೋಗುವ ಹಾಗಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ರೈತರ ಈ ದಿಢೀರ್ ಪ್ರತಿಭಟನೆ ಹಾಗೂ ಆಕ್ರೋಶದಿಂದಾಗಿ ಕಾರ್ಖಾನೆ ಮಾಲೀಕರು ಮತ್ತು ಆಡಳಿತ ಮಂಡಳಿಯೂ ಆತಂಕಗೊಂಡಿದೆ.
ಕಬ್ಬು ದರ ನಿಗದಿವರೆಗೂ ಕಾರ್ಖಾನೆಗಳ ಬಂದ್
ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಮುನ್ನವೇ ಕಬ್ಬಿನ ದರವನ್ನು ವೈಜ್ಞಾನಿಕವಾಗಿ ಘೋಷಿಸಬೇಕು ಎಂಬುದು ರೈತರ ದೀರ್ಘಕಾಲದ ಬೇಡಿಕೆಯಾಗಿದೆ. ಆದರೆ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಕಬ್ಬು ಕಟಾವು ಆರಂಭವಾಗುವ ಈ ಸಂದರ್ಭದಲ್ಲೇ ದರ ನಿಗದಿಯಾಗದಿದ್ದರೆ ರೈತರಿಗೆ ತೀವ್ರ ನಷ್ಟವಾಗಲಿದೆ. ಹೀಗಾಗಿ, ಬೇಡಿಕೆ ಈಡೇರುವವರೆಗೆ ಕಬ್ಬು ನುರಿಸುವಿಕೆ ಪ್ರಕ್ರಿಯೆಯನ್ನು ಆರಂಭಿಸಬಾರದು ಹಾಗೂ ಸಕ್ಕರೆ ಮಾರಾಟವನ್ನೂ ಸ್ಥಗಿತಗೊಳಿಸಬೇಕು ಎಂದು ರೈತರು ಪಟ್ಟುಹಿಡಿದಿದ್ದಾರೆ. ಇದಕ್ಕೆ ಸ್ಥಳೀಯವಾಗಿ ಕೆಲವು ಕಾರ್ಖಾನೆಗಳ ಮಾಲೀಕರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಸರ್ಕಾರಕ್ಕೆ ರೈತರ ಗಡುವು
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಿ, ರೈತರ ಮುಖಂಡರೊಂದಿಗೆ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆಯನ್ನು ಕಾನೂನುಬದ್ಧವಾಗಿ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಅನ್ನದಾತರ ಈ ಮುಷ್ಟಿಯುದ್ಧದ ಹೋರಾಟವು ಮುಂದುವರಿದರೆ ರಾಜ್ಯದಲ್ಲಿ ಕಬ್ಬು ಕೃಷಿ ಹಾಗೂ ಸಕ್ಕರೆ ಉದ್ಯಮದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿದೆ. ಕೂಡಲೇ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ಸಾರ್ವಜನಿಕ ವಲಯದಲ್ಲೂ ಒತ್ತಾಯ ಕೇಳಿಬಂದಿದೆ.
#Vijayapura #SugarcaneFarmers #KisanSangh #SugarMills #FairPrice #KarnatakaNews #UdayakalaNews #FarmersProtest


