Wednesday, September 30, 2026
Menu

ಚಿಕ್ಕಮಗಳೂರಿನಲ್ಲಿ ಹಣ, ಚಿನ್ನ ವಂಚಿಸುತ್ತಿದ್ದ ನಕಲಿ ಲೇಡಿ ಪಿಎಸ್‌ಐ ಅರೆಸ್ಟ್‌

ಪಿಎಸ್‌ಐ ಎಂದು ಸಾರ್ವಜನಿಕರನ್ನು ನಂಬಿಸಿ ಹಣ ಮತ್ತು ಚಿನ್ನಾಭರಣ ದೋಚುತ್ತಿದ್ದ ಮಹಿಳೆಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ರಾಮನಗರದ ನಿವೇದಿತಾ ಗೌಡ ಬಂಧಿತ ನಕಲಿ ಪಿಎಸ್‌ಐ, ಆಕೆ ಚಿಕ್ಕಮಗಳೂರು ನಗರದಲ್ಲಿ ಕೆಫೆ ನೆಸುತ್ತಿದ್ದಳು, ಅಲ್ಲಿಗೆ ಬರುತ್ತಿದ್ದ ಯುವಕರು ಮತ್ತು ಮಹಿಳೆಯರನ್ನು ಪರಿಚಯಿಸಿಕೊಂಡು ತಾನು ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪಿಎಸ್‌ಐ ಎಂದು ಹೇಳಿಕೊಳ್ಳುತ್ತಿದ್ದಳು. ರಜೆ ಮೇಲೆ ಚಿಕ್ಕಮಗಳೂರಿಗೆ ಬಂದಿರುವುದಾಗಿ ನಂಬಿಸುತ್ತಿದ್ದಳು.

ಪೊಲೀಸ್ ಅಧಿಕಾರಿಗಳ ರೀತಿ ಹೇರ್‌ಕಟ್ ಹಾಗೂ ಉಡುಪು ಧರಿಸುತ್ತಿದ್ದಳು, ಪರಿಚಯವಾದವರಿಂದ ಓಡಾಡಲೆಂದು ಐಷಾರಾಮಿ ಕಾರುಗಳನ್ನು ಪಡೆದುಕೊಂಡು ಬೇರೆಯವರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.

ಪೊಲೀಸ್‌ ತನಿಖೆ ವೇಳೆ ನಿವೇದಿತಾ ೨೫ಕ್ಕೂ ಹೆಚ್ಚು ಮಂದಿಗೆ ಕೋಟ್ಯಾಂತರ ರೂಪಾಯಿ ಹಾಗೂ ಚಿನ್ನಾಭರಣ ವಂಚಿಸಿರುವುದಾಗಿ ಗೊತ್ತಾಗಿದೆ, ವಂಚನೆಗೊಳಗಾದ 20ಕ್ಕೂ ಹೆಚ್ಚು ಮಂದಿ ನೀಡಿದ ದೂರಿನ ಆಧಾರದಡಿ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ನಿವೇದಿತಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ, ಆಕೆಯ ಮೊಬೈಲ್‌ನಲ್ಲಿ ಬೇರೆ ಹೆಸರುಗಳಿರುವ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಬೇರೆ ಜಿಲ್ಲೆಗಳಲ್ಲೂ
ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಂಚಿಸಿದ ಹಣ ಹಾಗೂ ಚಿನ್ನಾಭರಣವನ್ನು ಪ್ರಿಯಕರ ದೇವ್‌ಗೆ ನೀಡಿರುವುದಾಗಿ ನಿವೇದಿತಾ ಹೇಳಿದ್ದಾಳೆ. ಆಕೆಯ ಪ್ರಿಯಕರನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Related Posts

Leave a Reply

Your email address will not be published. Required fields are marked *