ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗಾಗಿ ರಚಿಸಿರುವ ವಿಶೇಷ ತನಿಖಾ ತಂಡದಿಂದ ತಮ್ಮನ್ನು ಕೈ ಬಿಡುವಂತೆ ಎಎಸ್ಪಿ ಡಾ. ವೆಂಕಟೇಶ ಪ್ರಸನ್ನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಹೀಗಾಗಿ ಪ್ರಕರಣದ ಮರು ತನಿಖೆ ಆರಂಭಕ್ಕೂ ಮೊದಲೇ ದೊಡ್ಡ ಹಿನ್ನಡೆಯಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ರಾಜ್ಯ ಸರ್ಕಾರ ಪ್ರಕರಣದ ಮರು ತನಿಖೆಗಾಗಿ ಎಸ್‌ಐಟಿ ತಂಡ ರಚನೆ ಮಾಡಿದೆ. ಸೌಜನ್ಯ ತಾಯಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೆಂಕಟೇಶ್ ಪ್ರಸನ್ನ ತನಿಖಾ ತಂಡದಿಂದ ಹೊರ ಬರಲು ಬಯಸಿದ್ದಾರೆ ಎನ್ನಲಾಗಿದೆ.
ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ತಂಡ ರಚಿಸಲಾಗಿದ್ದು ತಂಡದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಮತ್ತು ಡಿಐಜಿ ಸಿ. ಎಚ್. ಸುಧೀರ್ ಕುಮಾರ್ ರೆಡ್ಡಿ, ಗುಪ್ತದಳದ ಎಸ್ಪಿ ನಿಶಾ ಜೇಮ್ಸ್, ಸಿಐಡಿ ಎಸ್ಪಿ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಎಸ್ಪಿ ವೆಂಕಟೇಶ್ ಪ್ರಸನ್ನ ಸೇರಿ ನಾಲ್ವರು ಅಧಿಕಾರಿಗಳು ಸದಸ್ಯರಾಗಿದ್ದರು.
ಧರ್ಮಸ್ಥಳ ಸೌಜನ್ಯ ಸಾವಿನ ಪ್ರಕರಣದ ಮರು ತನಿಖೆ ನಡೆಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಆರೋಪಿಗಳನ್ನು ಈಗಾಗಲೇ ಖುಲಾಸೆಗೊಳಿಸಿದೆ. ಇದನ್ನು ಪ್ರಶ್ನಿಸಿ ಸೌಜನ್ಯ ಅವರ ತಾಯಿ ಕುಸುಮಾವತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮರುತನಿಖೆಗೆ ಮನವಿ ಮಾಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಕುಸುಮಾವತಿ ಅವರು ಸುಪ್ರೀಂಕೋರ್ಟ್‌ಗೆ ವಿಶೇಷ ಮನವಿ ಸಲ್ಲಿಸಿದ್ದರು.
ತಿಂಗಳ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಂಜಯ್‌ಕುಮಾರ್ ಪೀಠ ತೀರ್ಪು ಕಾಯ್ದಿರಿಸಿತ್ತು. ಪ್ರಕರಣದ ಮರು ತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಹೊಸ ಎಸ್‌ಐಟಿ ರಚಿಸಿ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚನೆ ನೀಡಿದೆ. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸ ತನಿಖೆಯಲ್ಲಿ ಸೇರಿಸದಂತೆ ಹೇಳಿದೆ. ತನಿಖಾಧಿಕಾರಿಗಳು ಸರಿಯಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ ಸಿಬಿಐ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಈ ಹಿಂದೆ ಮರುತನಿಖೆಗೆ ವಿರೋಧ ವ್ಯಕ್ತಪಡಿಸಿದ್ದ ಕರ್ನಾಟಕ ಸರ್ಕಾರ, ನಿಲುವು ಬದಲಿಸಿ ಮರು ತನಿಖೆಗೆ ಬೆಂಬಲ ಸೂಚಿಸಿದೆ.


