ಉದಯಕಾಲ ನ್ಯೂಸ್, ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮಾಚರಣೆಯ ವೇಳೆ ಸಾರ್ವಜನಿಕ ಸುರಕ್ಷತೆ ಕಾಪಾಡಲು ಹಾಗೂ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲು ರಾಜ್ಯ ಪೊಲೀಸ್ ಇಲಾಖೆಯು ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಪಟಾಕಿ ಸಿಡಿಸಲು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಮಯವನ್ನು ನಿಗದಿಪಡಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿ ನಿಷೇಧ ಹಾಗೂ ಷರತ್ತುಗಳು
* ಆಸ್ಪತ್ರೆಗಳು, ಪೆಟ್ರೋಲ್ ಬಂಕ್‌ಗಳು, ಅನಿಲ ಕೇಂದ್ರಗಳು, ವೃದ್ಧಾಶ್ರಮಗಳು ಮತ್ತು ಧಾರ್ಮಿಕ ಸ್ಥಳಗಳ ಸುತ್ತಮುತ್ತ ಪಟಾಕಿಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
* ಸಾರ್ವಜನಿಕರು ಹಬ್ಬ ಆಚರಿಸುವಾಗ ಕಡ್ಡಾಯವಾಗಿ ಕೆಲವು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವಹಿಸಬೇಕು.
* ಪಟಾಕಿ ಹಚ್ಚುವಾಗ ಕೈಗೆ ಗ್ಲೌಸ್, ಕಣ್ಣಿಗೆ ಸುರಕ್ಷತಾ ಕನ್ನಡಕ ಧರಿಸಬೇಕು ಹಾಗೂ ಹತ್ತಿಯ (Cotton) ಬಟ್ಟೆಗಳನ್ನು ಮಾತ್ರ ಬಳಸಬೇಕು.
* ಸಿಂಥೆಟಿಕ್, ನೈಲಾನ್ ಮತ್ತು ಪಾಲಿಸ್ಟರ್ ಬಟ್ಟೆಗಳನ್ನು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು
* ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ಕಡ್ಡಾಯವಾಗಿ ಜೊತೆಯಿರಬೇಕು ಮತ್ತು ಯಾವುದೇ ಕಾರಣಕ್ಕೂ ಕೈಯಲ್ಲಿ ಪಟಾಕಿಗಳನ್ನು ಹಿಡಿದು ಹಚ್ಚಬಾರದು.
* ಅಧಿಕೃತ ಪರವಾನಗಿ ಪಡೆದ ಮಳಿಗೆಗಳಿಂದ ಕ್ಯೂಆರ್ ಕೋಡ್ ಪರಿಶೀಲಿಸಿ ಉತ್ತಮ ಗುಣಮಟ್ಟದ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಬೇಕು.
ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ
ಬಳಸಿದ ಪಟಾಕಿಗಳನ್ನು ಬಕೆಟ್‌ನಲ್ಲಿಟ್ಟು ಅದಕ್ಕೆ ಮರಳು ಅಥವಾ ನೀರನ್ನು ಹಾಕಿ ಸಂಪೂರ್ಣವಾಗಿ ನಂದಿಸಬೇಕು ಹಾಗೂ ಹತ್ತಿರದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಕಾಯ್ದಿಟ್ಟುಕೊಳ್ಳಬೇಕು. ನಿಗದಿತ ಸಮಯ ಮೀರಿ ಪಟಾಕಿ ಸಿಡಿಸುವವರ ಅಥವಾ ಅಕ್ರಮವಾಗಿ ಪಟಾಕಿ ಮಾರಾಟ ಮಾಡುವವರ ವಿರುದ್ಧ ಬಿಎನ್‌ಎಸ್ (BNS), ಸ್ಫೋಟಕ ಕಾಯ್ದೆ ಹಾಗೂ ಮಾಲಿನ್ಯ ನಿಯಂತ್ರಣ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ. ಸಾರ್ವಜನಿಕರು ಇಂತಹ ಉಲ್ಲಂಘನೆಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ ಸಂಖ್ಯೆ ‘112’ ಅಥವಾ ‘108’ ಗೆ ತಕ್ಷಣವೇ ಮಾಹಿತಿ ನೀಡುವಂತೆ ಕೋರಲಾಗಿದೆ.
#GreenDiwali #KarnatakaPolice #Deepavali2026 #GreenCrackers #SafetyGuidelines #UdayakalaNews #PublicSafety

