ಬೆಂಗಳೂರಿನ ಆರ್.ಟಿ.ನಗರ ಗಂಗೇನಹಳ್ಳಿಯ ಮನೆಯೊಂದರಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿವೆ. 35 ವರ್ಷದ ಡೇವಿಡ್ ಮತ್ತು 30 ವರ್ಷದ ಸುಮಿತ್ರಾ ಮೃತರು. ಇವರು 10 ವರ್ಷದ ಹಿಂದೆ ಮದುವೆಯಾಗಿದ್ದರು.
ಆರ್.ಟಿ.ನಗರ ಪೊಲೀಸರು ಮತ್ತು ಸೊಕೊ ತಂಡ ಸ್ಥಳಕ್ಕೆ ಆಗಮಿಸಿದ್ದು, ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಮಿತ್ರಾ ಮೃತದೇಹ ಮನೆಯ ಕೆಳಗಡೆ ಇತ್ತು. ಅವರನ್ನು ಉಸಿರುಗಟ್ಟಿಸಿ ಸಾಯಿಸಿರುವ ಅನುಮಾನ ವ್ಯಕ್ತವಾಗಿದೆ. ಡೇವಿಡ್ ದೇಹವು ಮನೆಯ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಡೇವಿಡ್ ಕೈಗಳ ಮೇಲೆ ತರಚಿದ ಗುರುತುಗಳು ಕಂಡುಬಂದಿವೆ.
ಡೇವಿಡ್ ತನ್ನ ಪತ್ನಿ ಸುಮಿತ್ರಾ ಅವರನ್ನು ಉಸಿರುಗಟ್ಟಿಸಿ ಕೊಲೆಗೈದು, ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೈಗಳ ಮೇಲಿನ ಗುರುತುಗಳು ಸುಮಿತ್ರಾ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ ಉಂಟಾಗಿರಬಹುದು ಎಂದು ಅನುಮಾನಿಸಲಾಗಿದೆ.
ಡಿಸಿಪಿ ನೇಮಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಮಾಹಿತಿ ಪ್ರಕಾರ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಮಕ್ಕಳನ್ನು ಸೋದರ ಸಂಬಂಧಿಯೊಬ್ಬರು ತಮ್ಮ ಮನೆಗೆ ಕರೆದೊಯ್ದಿದ್ದರು ಎಂದು ತಿಳಿಸಿದರು. ಡೇವಿಡ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರೂ ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷಾ ವರದಿ ಮತ್ತು ಸ್ಥಳದಿಂದ ಸಂಗ್ರಹಿಸಿದ ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ನಿಜ ತಿಳಿದು ಬರಲಿದೆ.


