Menu

ಕೆಲಸಕ್ಕಿದ್ದ ಮನೆಯಿಂದ 25 ಲಕ್ಷ ರೂ.ಕಳವುಗೈದು ಪರಾರಿಯಾಗುತ್ತಿದ್ದ ದಂಪತಿ ಅರೆಸ್ಟ್‌

ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ನೇಪಾಳಿ ದಂಪತಿ, 25 ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಅಮೃತಹಳ್ಳಿ ಪೊಲೀಸರು ದಾಳಿ ನಡೆಸಿ ಬಂಧಿಸಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

ನೇಪಾಳದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ಬಂಧಿತರು. ದಂಪತಿ ಅಮೃತಹಳ್ಠಿಯ ಅರ್ಕಾವತಿ ಲೇಔಟ್‌ನಲ್ಲಿರುವ ಕಾಂಟ್ರಾಕ್ಟರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಮನೆ ಕೆಲಸಕ್ಕೆ, ಪತಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿಕೊಂಡಿದ್ದರು. ಒಂದು ತಿಂಗಳಲ್ಲೇ ಮನೆಯ ಮಾಲೀಕರು ಹಣ ಎಲ್ಲಿ ಇಟ್ಟಿರುತ್ತಾರೆ, ಕೀ ಎಲ್ಲಿದೆ ಎಂಬ ಮಾಹಿತಿ ಸಂಗ್ರಹಿಸಿದ್ದರು. ಕಳ್ಳತನ ಮಾಡುವ ಉದ್ದೇಶದಿಂದಲೇ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ.

ಕಾಂಟ್ರಾಕ್ಟರ್ ಕೆಲಸಗಾರರಿಗೆ ಸಂಬಳ ನೀಡಲು ಬ್ಯಾಂಕ್‌ನಿಂದ 25 ಲಕ್ಷ ರೂಪಾಯಿ ಡ್ರಾ ಮಾಡಿ, ಮನೆಯ ಕಬೋರ್ಡ್‌ನಲ್ಲಿ ಇಟ್ಟಿದ್ದರು. ಕಬೋರ್ಡ್‌ ಕೀಯನ್ನು ಮತ್ತೊಂದು ಕಬೋರ್ಡ್‌ನಲ್ಲಿ ಇಟ್ಟಿರುವ ವಿಚಾರ ಆರೋಪಿಗಳಿಗೆ ಗೊತ್ತಾಗಿತ್ತು. ಮನೆಯ ಮಾಲೀಕರು ಇಲ್ಲದ ಸಮಯ ನೋಡಿ ದಂಪತಿ ಸುಲಭವಾಗಿ ಕಬೋರ್ಡ್ ತೆರೆ, 25 ಲಕ್ಷ ರೂಪಾಯಿ ಇದ್ದ ಬ್ಯಾಗ್ ಒಯ್ದು ಪರಾರಿಯಾಗಿದ್ದರು.

ಮನೆಯ ಮಾಲೀಕರು ವಾರದ ಹಿಂದೆ ಹೊರಗೆ ತೆರಳಿದ್ದರು. ವಾಪಸ್ ಬಂದಾಗ ದಂಪತಿ ಕಾಣೆಯಾಗಿದ್ದರು. ಅನುಮಾನದಿಂದ ಅವರು ಕಬೋರ್ಡ್ ಪರಿಶೀಲಿಸಿದಾಗ ಅದರಲ್ಲಿದ್ದ 25 ಲಕ್ಷ ರೂಪಾಯಿ ಕಳವಾಗಿತ್ತು. ಕೂಡಲೇ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳು ಬೆಂಗಳೂರು ತೊರೆಯುವ ಮೊದಲೇ ಕೆಂಗೇರಿ ಬಳಿ ದಂಪತಿಯನ್ನು ಬಂಧಿಸಿದ್ದಾರೆ.

ದಂಪತಿ ಬೇರೆ ಬೇರೆ ಮನೆಗಳಲ್ಲಿ ಕೆಲಸಕ್ಕೆ ಸೇರಿ ಕಳ್ಳತನ ಮಾಡುವ ಸಂಚು ಹೊಂದಿದ್ದರು. ಕಡಿಮೆ ಸಂಬಳಕ್ಕೆ ಒಪ್ಪಿಕೊಂಡು ಮನೆ ಮಾಲೀಕರ ವಿಶ್ವಾಸ ಗಳಿಸಿ ಕಳ್ಳತನ ನಡೆಸಿದ್ದರು.  ಬಂಧಿತರಾದ ಪವನ್ ಮತ್ತು ಸೀತಾ ಬಿಸ್ತಾ ದಂಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *