Menu

ಡಿಎಂಕೆಗೆ ಕೈ ಕೊಟ್ಟ ಕಾಂಗ್ರೆಸ್‌, ಇಂಡಿ ಪರಾಮರ್ಶೆ ಮಾಡಲಿ: ಆರ್‌ ಅಶೋಕ

ತಮಿಳುನಾಡಲ್ಲಿ ಡಿಎಂಕೆ ಜೊತೆ ಚುನಾವಣೆ ಎದುರಿಸಿದ ಕಾಂಗ್ರೆಸ್‌, ಈಗ ಅದೇ ಪಕ್ಷಕ್ಕೆ ಕೈ ಕೊಟ್ಟಿದೆ. ಇಂಡಿ ಒಕ್ಕೂಟದ ಮಿತ್ರಪಕ್ಷಗಳು ಈ ಬಗ್ಗೆ ಪರಾಮರ್ಶೆ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಲ್ಲಿ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ. ಕಾಂಗ್ರೆಸ್‌ನ ಸ್ನೇಹ ಮಾಡಿದ ಡಿಎಂಕೆ ಪಕ್ಷದ ನಾಯಕರು ಈಗ ಸಪ್ಪೆ ಮೋರೆ ಹಾಕಿಕೊಂಡಿದ್ದಾರೆ. ಚುನಾವಣೆ ಬಳಿಕ ಒಂದಾಗಿ ಸರ್ಕಾರ ರಚಿಸಬೇಕೆಂದು ತೀರ್ಮಾನವಾಗಿತ್ತು. ಫಲಿತಾಂಶ ಬಂದ ನಂತರ ಕಾಂಗ್ರೆಸ್‌ ಗೆದ್ದೆತ್ತಿನ ಬಾಲ ಹಿಡಿದಿದೆ. ಯಾವುದೇ ಸಿದ್ಧಾಂತವನ್ನು ಇವರು ಅನುಸರಿಸುತ್ತಿಲ್ಲ. ಇವರನ್ನು ನಂಬಿದ ಡಿಎಂಕೆ ಬೆನ್ನಿಗೆ ಚೂರಿ ಹಾಕಿದ್ದು, ಕಾಂಗ್ರೆಸ್‌ ಕೈ ಕೊಡುವ ಪಕ್ಷ ಎಂದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್‌ ಪಕ್ಷ ನಂಬಿಕೆಗೆ ಅರ್ಹವಲ್ಲ ಎಂಬುದು ಸ್ಪಷ್ಟವಾಗಿದೆ. ಇಂಡಿ ಒಕ್ಕೂಟದಲ್ಲಿರುವ ಬೇರೆ ಪಕ್ಷಗಳು ಈ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್‌ ಹೇಗೆ ಕೈ ಕೊಡುತ್ತದೆ ಎಂದು ಗಮನಿಸಬೇಕಾಗುತ್ತದೆ. ಇಲ್ಲವಾದರೆ ಮಿತ್ರಪಕ್ಷಗಳಿಗೂ ಡಿಎಂಕೆ ಸ್ಥಿತಿಯೇ ಬರಲಿದೆ ಎಂದರು.

ಶಾಸಕ ಡಿ.ಎನ್‌.ಜೀವರಾಜ್‌ಗೆ ಪ್ರಮಾಣವಚನ ಬೋಧಿಸಲು ಸ್ಪೀಕರ್‌ ಯು.ಟಿ.ಖಾದರ್‌ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಬಳಿ ಹೋದ ನಂತರ ಪ್ರಮಾಣವಚನ ಬೋಧಿಸಲು ಅವಕಾಶ ನೀಡಿದ್ದಾರೆ. ಒಂದು ಬಾರಿ ರಾಜ್ಯಪತ್ರದಲ್ಲಿ ಹೆಸರು ಪ್ರಕಟವಾದ ನಂತರ ಹಾಗೂ ಚುನಾವಣಾ ಆಯೋಗ ಪ್ರಮಾಣಪತ್ರ ನೀಡಿದ ಬಳಿಕ ಪ್ರಮಾಣವಚನ ಬೋಧಿಸಲೇಬೇಕು. ರಾಜ್ಯಪಾಲರು ಅಥವಾ ಅವರು ಸೂಚಿಸಿದ ವ್ಯಕ್ತಿ ಪ್ರಮಾಣವಚನ ಬೋಧಿಸಬಹುದು. ಕೊನೆ ಹಂತದಲ್ಲಿ ಸ್ಪೀಕರ್‌ ಯು.ಟಿ.ಖಾದರ್‌ ಅವರೇ ಫಲಿತಾಂಶವನ್ನು ಒಪ್ಪಿಕೊಂಡು ಪ್ರಮಾಣವಚನ ನೀಡುತ್ತಿರುವುದು ಸಂತಸ ತಂದಿದೆ ಎಂದು ಕುಟುಕಿದರು.

ವೋಟ್‌ ಚೋರಿ ಮಾಡಿರುವುದು ಯಾರೆಂದು ಸ್ಪಷ್ಟವಾಗಿದೆ. ಡಕಾಯಿತಿ ಎಂದು ಆರೋಪ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲೇ ಕೋರ್ಟ್‌ಗೆ ಹೋಗಬೇಕಿತ್ತು. ರಾಜೇಗೌಡರು ಗೆದ್ದಾಗ ಚುನಾವಣಾ ಆಯೋಗ ಸರಿ ಇದೆ, ಈಗ ಸರಿ ಇಲ್ಲ ಎನ್ನುತ್ತಾರೆ. ಕೇರಳದಲ್ಲಿ ಇವಿಎಂ ಸರಿ ಇದೆ, ಪಶ್ಚಿಮ ಬಂಗಾಳದಲ್ಲಿ ಸರಿ ಇಲ್ಲ ಎಂದು ರಾಹುಲ್‌ ಗಾಂಧಿ ಹೇಳುತ್ತಿದ್ದು, ಇವರೆಲ್ಲರಿಗೂ ಬ್ರೈನ್‌ ಮ್ಯಾಪಿಂಗ್‌ ಮಾಡಬೇಕಿದೆ. ಇನ್ನಾದರೂ ಚುನಾವಣಾ ಫಲಿತಾಂಶಗಳ ಬಗ್ಗೆ ಆಲೋಚಿಸಿ ಮಾತನಾಡಲಿ ಎಂದರು.

ಮಲ್ಲಿಕಾರ್ಜುನ ಖರ್ಗೆ ಪ್ರವೇಶದ ಬಳಿಕ ಸಿಎಂ ಕುರ್ಚಿ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅವರ ಕನಸು ಭಗ್ನವಾಗಿದೆ. ಕನಕಪುರದ ಬಂಡೆಯಾದ ನಾನು ವಿಧಾನಸೌಧಕ್ಕೆ ಮೆಟ್ಟಿಲಾಗುತ್ತೇನೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕರು ಈ ಬಂಡೆಯನ್ನು ಶಿಲೆಯಾಗಿ ಕೆತ್ತುತ್ತಲೇ ಇದ್ದಾರೆ. ಇನ್ನೂ ಸಂಪೂರ್ಣವಾಗಿ ಶಿಲೆ ನಿರ್ಮಾಣವಾಗಿಲ್ಲ. ಡಿ.ಕೆ.ಶಿವಕುಮಾರ್‌ ಮೆಟ್ಟಿಲಾಗಿಯೇ ಇರುತ್ತಾರೆಯೇ ಹೊರತು ಶಿಲೆಯಾಗಲು ಸಾಧ್ಯವಾಗಲೇ ಇಲ್ಲ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *