Menu

ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ನಿಧನ: ಸಿಎಂ ಸಂತಾಪ

ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ  ಬೆಂಗಳೂರಿನ ಎಂಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸಿಎಂ ಡಿಕೆ ಶಿವಕುಮಾರ್  ತೀವ್ರ ಸಂತಾಪ ಸೂಚಿಸಿ, ಸೂರಜ್ ಹೆಗ್ಡೆ ಅವರ ಅಗಲಿಕೆ ಸುದ್ದಿ ಕೇಳಿ ನನ್ನ ಮನಸ್ಸಿಗೆ ಆಘಾತವಾಗಿದೆ. ಚಿಕ್ಕ ವಯಸ್ಸಿಗೆ ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ನಂಬಲೇ ಆಗುತ್ತಿಲ್ಲ. ಸೂರಜ್ ಅವರು ಎಐಸಿಸಿ ಕಾರ್ಯದರ್ಶಿಯಾಗಿ ತಮಿಳುನಾಡು ಹಾಗೂ ಪುದುಚೆರಿ ರಾಜ್ಯದ ಉಸ್ತುವಾರಿಯಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.

ಸೂರಜ್ ಹೆಗ್ಡೆ ಅವರು ತಮ್ಮ ತಾತ ದೇವರಾಜ ಅರಸು ಅವರಂತೆ ಹಿಂದುಳಿದ ವರ್ಗಗಳು, ಕಾರ್ಮಿಕರ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿಗಳಾಗಿ ಪಕ್ಷದ ಸಂಘಟನೆ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಈಗ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಸಿಎಂ ಸ್ಮರಿಸಿದ್ದಾರೆ.

ಸೂರಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೂರಜ್‌ ಹೆಗಡೆ ನಿಧನಕ್ಕೆ ಸಂತಾಪನ ವ್ಯಕ್ತಪಡಿಸಿ, ಅವರ ಹಠಾತ್ ಅಗಲಿಕೆಯಿಂದ ಆಘಾತಕ್ಕೀಡಾಗಿದ್ದೇನೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಸೂರಜ್ ಅವರು ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ನಮ್ಮ ನಾಡಿನ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ ಮೊಮ್ಮಗನಾಗಿದ್ದ ಸೂರಜ್ ಅವರು ಜನಪರ ರಾಜಕಾರಣದ ಪರಂಪರೆಯನ್ನು ಬದ್ಧತೆ ಮತ್ತು ಕಾಳಜಿಯಿಂದ ಮುನ್ನಡೆಸುತ್ತಾ ಬರುತ್ತಿದ್ದರು. ಸೂರಜ್ ಅವರಿಗೆ ರಾಜಕೀಯದಲ್ಲಿ ಇನ್ನಷ್ಟು ಅವಕಾಶಗಳು ಒದಗಿ ಬರುವುದಿತ್ತು. ಇಂತಹ ಸಮಯದಲ್ಲಿಯೇ ಅವರು ನಮ್ಮನ್ನಗಲಿ ಹೋಗಿರುವುದು ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ. ಸೂರಜ್ ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *