ಕಳೆದ ಹತ್ತು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿ ಗೇಮ್ಚೇಂಜರ್ ಆಗಬೇಕೆಂದು ಬಿಗಿಪಟ್ಟು ಹಿಡಿದರೂ ಇದು ಫಲ ನೀಡಿಲ್ಲ. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ತಮಿಳುನಾಡಿನಲ್ಲಿ ಬಿಜೆಪಿಯ ಪಾರಮ್ಯ ಮೆರೆಯಬೇಕೆಂಬ ಆಶಯದಿಂದ ರಾಜಕೀಯ ಪ್ರವೇಶಿಸಿದರೂ, ಇದಾವುದೂ ಕಾರ್ಯಾನುಗತ ಆಗದ ಪರಿಣಾಮವಾಗಿಯೇ ಅಣ್ಣಾಮಲೈ ಈಗ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಲು ಮುಂದಾಗಿರುವುದು.
ತಮಿಳುನಾಡಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಂದ ಇದೀಗ ಹೊಸ ರಾಜಕೀಯ ವರಸೆ. ಮೊನ್ನೆಯವರೆಗೂ ಭಾರತೀಯ ಜನತಾ ಪಕ್ಷದ ತೆಕ್ಕೆಯಲ್ಲಿದ್ದ ಇವರು, ತಮಿಳುನಾಡಿನ ಅಸೆಂಬ್ಲಿ ಚುನಾವಣೆಯ ಬಳಿಕ ದಿಢೀರ್ ಪಾರ್ಟಿ ತೊರೆದು ಮತ್ತೊಂದು ಪಾರ್ಟಿ ಹುಟ್ಟು ಹಾಕಿರುವುದು ಗಮನಾರ್ಹ. ಇದರ ಹಿಂದಿನ ರಾಜಕೀಯ ದೂರಾಲೋಚನೆ ಮತ್ತು ಒಳಮರ್ಮಗಳೇನು, ಸಾಮಾನ್ಯನಿಗೆ ಇದು ಅಷ್ಟು ಸುಲಭವಾಗಿ ಅರ್ಥವಾಗುವ ವಿಷಯವಲ್ಲ.
ದ್ರಾವಿಡ ನೆಲದಲ್ಲಿ ಕೇಸರಿ ದ್ವಜ ಹಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಕಷ್ಟದ ಕೆಲಸ ಎಂಬುದೀಗ ದಿಲ್ಲಿ ಬಿಜೆಪಿ ಅಗ್ರಸೇನಾನಿಗಳಿಗೆ ಅರ್ಥವಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಇವರ ಪರಮಾಪ್ತ ಅಮಿತ್ ಷಾ ಕಳೆದ ಎಂಟು- ಹತ್ತು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿ ಗೇಮ್ಚೇಂಜರ್ ಆಗಬೇಕೆಂದು ಬಿಗಿಪಟ್ಟು ಹಿಡಿದರೂ ಇದು ಫಲ ನೀಡಿಲ್ಲ. ಕರ್ನಾಟಕ ಕೇಡರ್ನ ಓರ್ವ ಐಪಿಎಸ್ ಅಧಿಕಾರಿ ತಮಿಳುನಾಡಿನಲ್ಲಿ ಬಿಜೆಪಿಯ ಪಾರಮ್ಯ ಮೆರೆಯಬೇಕೆಂಬ ಆಶಯದಿಂದ ರಾಜಕೀಯ ಪ್ರವೇಶಿಸಿದರೂ, ಇದಾವುದೂ ಕಾರ್ಯಾನುಗತ ಆಗದ ಪರಿಣಾಮವಾಗಿಯೇ ಅಣ್ಣಾಮಲೈ ಈಗ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಲು ಮುಂದಾಗಿರುವುದು.
ಸಿನಿಮಾ ನಟ ವಿಜಯ್ ರಾಜಕೀಯ ಯಶಸ್ವಿಯಿಂದ ನಿಜವಾಗಿಯೂ ಇಂದು ದೇಶದಲ್ಲಿ ಅತಿ ಹೆಚ್ಚು ಅಘಾತಕ್ಕೆ ಒಳಗಾಗಿರುವ ಪಾರ್ಟಿ ಬಿಜೆಪಿ ಎಂದರೆ ಅತಿಶಯವಲ್ಲ. ಇದೇ ವೇಳೆ ಬಿಜೆಪಿಗೆ ಸಿಜೆಪಿ ಮೇಲೆ ಕೂಡಾ ಒಳಗೊಳಗೆ ಆತಂಕ ಮತ್ತು ತಳಮಳ ಇದೆ. ಭಾರತೀಯತೆ ಮತ್ತು ಭಾವನಾತ್ಮಕ ವಿಷಯಗಳನ್ನು ಪದೇ ಪದೇ ಕೆದಕಿ ಮೋದಿ ಮತ್ತು ಷಾ ಪುಂಖಾನುಪುಂಖವಾಗಿ ಭಾಷಣ ಮಾಡಿದರೂ ತಮಿಳುನಾಡಿನಲ್ಲಿ ಬಿಜೆಪಿ ತನ್ನ ಸ್ವಂತ ರಾಜಕೀಯ ಅಸ್ತಿತ್ವವನ್ನು ಕಂಡುಕೊಳ್ಳಲಾಗಿಲ್ಲ. ಇದರ ಅರ್ಥ ಇಲ್ಲಿನ ಮತದಾರರು ದ್ರಾವಿಡ ನೆಲದ ಮೌಲ್ಯಗಳನ್ನು ಮತ್ತು ಇಲ್ಲಿನ ಜನ ನಾಯಕರನ್ನು ಅದೆಷ್ಟರ ಮಟ್ಟಿಗೆ ಸೈದ್ಧಾಂತಿಕವಾಗಿ ಒಪ್ಪಿಕೊಂಡಿದ್ದಾರೆಂಬುದು ಮೊನ್ನೆ ಜರುಗಿದ ಅಸೆಂಬ್ಲಿ ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ.
ದಕ್ಷಿಣ ಭಾರತದಲಿ ಪ್ರಾದೇಶಿಕ ಪಕ್ಷಗಳನ್ನು ಧೂಳೀಪಟಗೊಳಿಸಿ ಇಲ್ಲಿ ಖಾಯಂ ಆಗಿ ತನ್ನ ರಾಜಕೀಯ ವಸಾಹತುಗಳನ್ನು ಬಲವಾಗಿ ಭದ್ರಗೊಳಿಸುವ ಇದುವರೆಗಿನ ಎಲ್ಲ ಪ್ರಯತ್ನಗಳು ವಿಫಲವಾದ ಕಾರಣ ಅಣ್ಣಾಮಲೈ ಮೂಲಕ ಬಿಜೆಪಿಯ ಬೀ ಟೀಂ ಒಂದು ತಲೆಯೆತ್ತಲು ವೇದಿಕೆ ಸಜ್ಜಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಹತ್ತು ವರ್ಷಗಳ ಹಿಂದೆಯೇ ಬಿಜೆಪಿ ತನ್ನ ಶಕ್ತಿಯನ್ನು ನೆಲೆಗೊಳಿಸಲು ಯತ್ನಿಸಿತು. ಆದರೆ ಇದು ಪಶ್ಚಿಮ ಬಂಗಾಳದಲ್ಲಿ ತೃಣಮೂಲವನ್ನು ಧ್ವಂಸಗೊಳಿಸಿ ಅಧಿಕಾರವನ್ನು ನಡೆಸುವ ಪ್ರಮಾಣಕ್ಕೆ ಬಿಜೆಪಿ ಇಲ್ಲಿ ಬೆಳೆಯಲಾಗಲಿಲ್ಲ. ಈ ಎಲ್ಲ ಸೂಕ್ಷ ವಿಷಯಗಳ ಬೆನ್ನ ಹಿಂದೆಯೇ ಇಂದು ಅಣ್ಣಾಮಲೈ ಪರ್ಯಾಯ ರಾಜಕೀಯ ವ್ಯವಸ್ಥೆಗೆ ಮುಂದಾಗಿರುವುದು ಹೊಸ ರಾಜಕೀಯ ವ್ಯಾಖ್ಯಾನಕ್ಕೂ ಎಡೆ ಮಾಡಿಕೊಟ್ಟಿದೆ.


