ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾದ ನಿಯಮಗಳ ತಿದ್ದುಪಡಿಯಿಂದಾಗಿ ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸಿಎಂ ಡಿಕೆ ಶಿವಕುಮಾರ್ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ಸ್ಥಳದ ಬಳಿ ಮನವಿ ಸಲ್ಲಿಸಲು ಬಂದಿದ್ದ ಜಿಕೆವಿಕೆ ಕೃಷಿ ವಿ.ವಿ ವಿದ್ಯಾರ್ಥಿಗಳನ್ನು ಗಮನಿಸಿದ ಸಿಎಂ ಡಿ ಕೆ ಶಿವಕುಮಾರ್ ವಿದ್ಯಾರ್ಥಿಗಳನ್ನು ಹತ್ತಿರ ಕರೆದು ಮಾತನಾಡಿದರು.
ಅವರನ್ನು ಮರದ ನೆರಳಿಗೆ ಕರೆದುಕೊಂಡು ಹೋಗಿ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದು, ಯಾವ ಹಂತದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕೇಳಿದರು. ವಿದ್ಯಾರ್ಥಿಗಳ ಮಾತುಗಳನ್ನು ಆಲಿಸಿದ ನಂತರ ಪ್ರತಿಭಟನೆ ಕೈ ಬಿಡಿ. ನಮ್ಮ ಸರ್ಕಾರ ನಿರುದ್ಯೋಗ ನಿರ್ಮೂಲನೆಗೆ ಕ್ರಮ ತೆಗೆದುಕೊಂಡಿದೆ. ನಿಮಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾದ ನಿಯಮಗಳ ತಿದ್ದುಪಡಿಯಿಂದ ಕೃಷಿ ಪದವೀಧರರಿಗೆ ಸಮಸ್ಯೆಯಾಗಿದ್ದು, ಇವರ ಉದ್ಯೋಗ ಅವಕಾಶಗಳಿಗೆ ಧಕ್ಕೆಯಾಗದಂತೆ ಕಾನೂನಾತ್ಮಕಾವಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚೆಗಷ್ಟೇ ಸರ್ಕಾರವು 900ಕ್ಕೂ ಹೆಚ್ಚು ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗೆ ಬಿ.ಇ, ಬಿ.ಟೆಕ್ನಲ್ಲಿ ಬಯೋ ಕೆಮಿಸ್ಟ್ರಿ ಓದಿದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದನ್ನು ಸ್ಮರಿಸಬಹುದು.


