ಉದಯಕಾಲ ನ್ಯೂಸ್, ಬೆಳಗಾವಿ: ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳು ಹಾಗೂ ಸಕ್ಕರೆ ಉದ್ಯಮ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಮಹತ್ವದ ಸಭೆ ಆರಂಭಗೊಂಡಿದೆ. ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ತಡವಾಗಿ ಆರಂಭವಾದ ಈ ಸಭೆಯಲ್ಲಿ ರಾಜ್ಯದ ವಿವಿಧೆಡೆಯ 81 ಸಕ್ಕರೆ ಕಾರ್ಖಾನೆಗಳ ಮಾಲೀಕರು, ಪ್ರಮುಖ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.
ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಹಕಾರ ಸಚಿವ ಲಕ್ಷ್ಮಣ ಸವದಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವೇದಿಕೆಯಲ್ಲಿ ಉಪಸ್ಥಿತರಿದ್ದಾರೆ. ಇದರೊಂದಿಗೆ ಪ್ರಮುಖ ಕಾರ್ಖಾನೆ ಮಾಲೀಕರಾದ ಡಾ. ಪ್ರಭಾಕರ ಕೋರೆ, ಸಂಗಮೇಶ ನಿರಾಣಿ, ಶ್ರೀಮಂತ ಪಾಟೀಲ್, ಅಜಯ್ ಕುಮಾರ್ ಸರನಾಯಿಕ ಸೇರಿದಂತೆ 81 ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಆಸನ ವ್ಯವಸ್ಥೆಗೆ ಪ್ರಭಾಕರ ಕೋರೆ ಗರಂ
ಸಭೆ ಆರಂಭಕ್ಕೂ ಮುನ್ನ ಸುವರ್ಣ ವಿಧಾನಸೌಧದಲ್ಲಿ ಆಸನ ವ್ಯವಸ್ಥೆಯ ವಿಚಾರವಾಗಿ ಸಣ್ಣಪುಡಿ ಅಸಮಾಧಾನ ವ್ಯಕ್ತವಾಯಿತು. ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ಮತ್ತು ಸಂಸದರನ್ನು ಮುಂದಿನ ಸಾಲಿನಲ್ಲಿ ಕೂರಿಸಿ, ಕಾರ್ಖಾನೆ ಮಾಲೀಕರಾದ ನಮ್ಮನ್ನು ಯಾಕೆ ಹಿಂದಿನ ಸಾಲಿನಲ್ಲಿ ಕೂರಿಸುತ್ತಿದ್ದೀರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೇಕಾದರೆ ಶಾಸಕರನ್ನು ವೇದಿಕೆ ಮೇಲೆ ಕೂರಿಸಿ, ಇಲ್ಲದಿದ್ದರೆ ನಾವು ಸಭೆ ಬಹಿಷ್ಕರಿಸಬೇಕಾಗುತ್ತದೆ ಎಂದು ಸಿಡಿಮಿಡಿಗೊಂಡ ಘಟನೆ ಸಭೆಯ ಆರಂಭದಲ್ಲಿ ಗಮನ ಸೆಳೆಯಿತು.
ಸಭೆಗೂ ಮುನ್ನ ನಾಯಕರ ಅಭಿಪ್ರಾಯ
ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸಂಗಮೇಶ ನಿರಾಣಿ, ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರಿ ನೌಕರರ ವೇತನ ಪರಿಷ್ಕರಿಸಿದಂತೆ ರೈತರ ಬೆಳೆಗಳ ಬೆಲೆಯನ್ನೂ ಪರಿಷ್ಕರಿಸಬೇಕು. ಕಬ್ಬಿಗೆ ಟನ್‌ಗೆ 5,500 ರಿಂದ 6,500 ರೂ. ವರೆಗೆ ಬೇಡಿಕೆ ಇಡಲಾಗಿದ್ದು, ರಂಗರಾಜನ್ ವರದಿ ಪ್ರಕಾರ ಎಂಎಸ್‌ಪಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಹಾಗೆಯೇ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಕ್ಕರೆ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಳವಾಗದಿರುವುದು ಮತ್ತು ಎಥೆನಾಲ್ ಖರೀದಿಯಲ್ಲಿನ ತೊಡಕುಗಳು ಕಾರ್ಖಾನೆಗಳ ಮೇಲೆ ಹಾಗೂ ರೈತರ ಮೇಲೆ ಬೀರುತ್ತಿರುವ ಪರಿಣಾಮವನ್ನು ಪ್ರಸ್ತಾಪಿಸಿದರು.
ರೈತರ ಹಿತರಕ್ಷಣೆಯೊಂದಿಗೆ ಕಾರ್ಖಾನೆ ಮಾಲೀಕರ ಕಷ್ಟಗಳನ್ನೂ ಆಲಿಸಿ ಸಮತೋಲಿತ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದು, ಇಂದಿನ ಸಭೆಯ ಅಂತಿಮ ನಿರ್ಧಾರದತ್ತ ಇಡೀ ರಾಜ್ಯದ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಉದ್ಯಮದ ಚಿತ್ತ ನೆಟ್ಟಿದೆ.
#SugarFactoryMeeting #BelagaviSuvarnaSoudha #CMDKShivakumar #SugarcaneGrowers #KarnatakaNews #UdayakalaNews #PrabhakarKore #SangameshNirani #MandyaBelagaviNews #FarmersIssues


