ಉದಯಕಾಲ ನ್ಯೂಸ್, ಸುಳ್ಯ/ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದ ಸುಳ್ಯ ತಾಲೂಕಿನ ತೊಡಿಕಾನದ ಹರ್ಲಡ್ಕ ಅರಣ್ಯದಂಚಿನಲ್ಲಿ, ಭಾಗಮಂಡಲ ಮೀಸಲು ಅರಣ್ಯದಿಂದ ಬಂದಿದ್ದ ಆನೆಗಳ ಹಿಂಡಿನಲ್ಲಿದ್ದ ಸುಮಾರು ಒಂದು ವರ್ಷ ಪ್ರಾಯದ ಮರಿ ಹೆಣ್ಣಾನೆಯೊಂದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಕೊಡಗು ಜಿಲ್ಲೆಯ ಭಾಗಮಂಡಲ ಮೀಸಲು ಅರಣ್ಯ ಪ್ರದೇಶದಿಂದ ಆಹಾರ ಅರಸುತ್ತಾ ಅಥವಾ ಸಂಚಾರದ ವೇಳೆ ಆನೆಗಳ ಹಿಂಡು ಹರ್ಲಡ್ಕ ಅರಣ್ಯದಂಚಿನ ಚಂದ್ರಶೇಖರಗೌಡ ಎಂಬವರ ರಬ್ಬರ್ ತೋಟದ ಸಮೀಪಕ್ಕೆ ಬಂದಿತ್ತು. ಬಳಿಕ ಹಿಂಡು ಮರಳಿ ಅರಣ್ಯದತ್ತ ತೆರಳುವ ಸಂದರ್ಭದಲ್ಲಿ ಕಡಿದಾದ ಗುಡ್ಡವನ್ನು ಹತ್ತುವಾಗ ಮರಿ ಆನೆ ಕಾಲು ಜಾರಿ ಕೆಳಕ್ಕೆ ಬಿದ್ದಿರುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಕಡಿದಾದ ಗುಡ್ಡದಿಂದ ಜಾರಿ ಬಿದ್ದ ಪರಿಣಾಮ ಉಂಟಾದ ಆಘಾತದಿಂದ ಮರಿ ಆನೆ ಮೃತಪಟ್ಟಿರಬಹುದು ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ನಿರಂಜನ್ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳಿಂದ ಸ್ಥಳ ಪರಿಶೀಲನೆ
ವಿಷಯ ತಿಳಿದ ಕೂಡಲೇ ಡಿಎಫ್ಒ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ, ಸುಳ್ಯದ ಆರಂಬೂರಿನ ಇಟಿಎಫ್ ತಂಡದೊಂದಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಪ್ರಶಾಂತ್ ಕುಮಾರ್ ಪೈ ಹಾಗೂ ವಲಯ ಅರಣ್ಯಾಧಿಕಾರಿ (RFO) ನಿರಂಜನ್ ಶೆಟ್ಟಿ ಸೇರಿದಂತೆ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮರಿ ಆನೆ ಪತ್ತೆಯಾದ ಸ್ಥಳ, ಸುತ್ತಮುತ್ತಲಿನ ಭೌಗೋಳಿಕ ಪರಿಸ್ಥಿತಿ ಹಾಗೂ ಕಡಿದಾದ ಗುಡ್ಡದ ಪ್ರದೇಶವನ್ನು ಪರಿಶೀಲನೆ ನಡೆಸಿದರು. ಆನೆಗಳ ಹಿಂಡು ಸಂಚರಿಸಿದ ಮಾರ್ಗ ಹಾಗೂ ಮರಿ ಆನೆ ಹಿಂಡಿನಿಂದ ಬೇರ್ಪಟ್ಟು ಬಿದ್ದಿದೆಯೇ ಎಂಬ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ.
ಡಾ. ನಿತಿನ್ ಪ್ರಭು ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ
ಮೃತ ಮರಿ ಆನೆಯ ಸಾವಿಗೆ ನಿಖರ ಕಾರಣ ಪತ್ತೆಹಚ್ಚುವ ನಿಟ್ಟಿನಲ್ಲಿ ಸುಳ್ಯ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ಅವರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆನೆಗೆ ಯಾವುದೇ ಹೊರಗಡೆಯ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಮರಿ ಆನೆಯು ಗುಡ್ಡದಿಂದ ಬಿದ್ದ ಪರಿಣಾಮ ಉಂಟಾದ ಆಂತರಿಕ ಆಘಾತ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎನ್ನಲಾಗಿದ್ದು, ರಜಾ ದಿನಗಳ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ. ಅರಣ್ಯ ಗಡಿಭಾಗದ ತೋಟದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರಲ್ಲಿ ಕಳವಳ ಮೂಡಿದೆ.
#SulliaNews #ElephantDeath #DakshinaKannada #BhagamandalaForest #UdayakalaNews #WildlifeKarnataka #ForestDepartment #KodaguBorders #ElephantHerd


