Saturday, October 24, 2026
Menu

ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ: ಕೆಜಿಗೆ 280 ರೂಪಾಯಿ – ಕಂಗಾಲಾದ ಗ್ರಾಹಕರು!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿ ಹಾಗೂ ಮಾರುಕಟ್ಟೆಗೆ ಸರಬರಾಜು ಕುಸಿದ ಪರಿಣಾಮ ಬೆಳ್ಳುಳ್ಳಿ ಬೆಲೆ ಮುಗಿಲುಮುಟ್ಟಿದೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ಗೆ ಬೆಳ್ಳುಳ್ಳಿ ಆವಕ ಶೇ.50ರಷ್ಟು ಕಡಿಮೆಯಾಗಿದ್ದು, ಇದರ ನೇರ ಪ್ರಭಾವ ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆ ಮೇಲೆ ಬೀರಿದೆ. ಸದ್ಯ ಬೆಂಗಳೂರಿನಲ್ಲಿ ಬೆಳ್ಳುಳ್ಳಿ ಚಿಲ್ಲರೆ ಮಾರಾಟ ದರ ಪ್ರತಿ ಕೆಜಿಗೆ 250 ರೂ.ನಿಂದ 280 ರೂಪಾಯಿಗೆ ಏರಿಕೆಯಾಗಿದ್ದು, ಸಾಮಾನ್ಯ ಜನರ ಬಜೆಟ್ ಮೇಲೆ ಭಾರೀ ಹೊರೆ ಬಿದ್ದಿದೆ.

ಪೂರೈಕೆಯಲ್ಲಿ ಭಾರಿ ಕುಸಿತ – ಕಾರಣವೇನು?

ಕರ್ನಾಟಕವು ಸ್ಥಳೀಯ ಬೇಡಿಕೆಯನ್ನು ಪೂರೈಸಲು ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಿಂದ ಬರುವ ಪೂರೈಕೆಯನ್ನು ಹೆಚ್ಚು ಅವಲಂಬಿಸಿದೆ. ಸದ್ಯ ಉತ್ತರ ಭಾರತದಿಂದ ಬರುತ್ತಿರುವ ದಾಸ್ತಾನು ಗಣನೀಯವಾಗಿ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆ ಬೆಳೆಯುವ ಪ್ರಕ್ರಿಯೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರೈತರು ಬೋರ್‌ವೆಲ್‌ಗಳು ಮತ್ತು ಟ್ಯಾಂಕರ್‌ ನೀರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಾಮಾನ್ಯವಾಗಿ ಬೆಂಗಳೂರಿಗೆ ಪ್ರತಿದಿನ ಸುಮಾರು 3,000 ಚೀಲ ಬೆಳ್ಳುಳ್ಳಿ (ಪ್ರತಿ ಚೀಲ 40-60 ಕೆಜಿ) ಬರುತ್ತಿತ್ತು. ಆದರೆ ಕಳೆದ ಕೆಲವು ದಿನಗಳಲ್ಲಿ ಪೂರೈಕೆ ಅರ್ಧದಷ್ಟು ಕುಸಿದಿದೆ ಎಂದು ಸಗಟು ವ್ಯಾಪಾರಿ ಮನೋಜ್ ತಿಳಿಸಿದ್ದಾರೆ.

ಕೃಷಿ ವೆಚ್ಚ ಏರಿಕೆ ಹಾಗೂ ವ್ಯತಿರಿಕ್ತ ಮಾರುಕಟ್ಟೆ ದರ

ಎಪಿಎಂಸಿಯಲ್ಲಿ ಬೆಳ್ಳುಳ್ಳಿ ಸಗಟು ಬೆಲೆ ಪ್ರತಿ ಕ್ವಿಂಟಲ್‌ಗೆ 10,000 ರೂ.ನಿಂದ 24,000 ರೂ.ವರೆಗೆ ಇದೆ (ಮಾದರಿ ಬೆಲೆ ₹12,000).
* ರಬಿ ಬಿತ್ತನೆ ಹಂಗಾಮಿನಲ್ಲಿ ಬೀಜಗಳ ಬೆಲೆಯೂ ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ ಪ್ರತಿ ಕ್ವಿಂಟಲ್‌ಗೆ 3,000 ರಿಂದ 6,000 ರೂ. ಇದ್ದ ಬೀಜಗಳ ಬೆಲೆ, ಈಗ 10,000 ರಿಂದ 15,000 ರೂ.ಗೆ ಏರಿಕೆಯಾಗಿದೆ.ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ ಕೆಲ ರೈತರು ಕೊಳವೆಬಾವಿ ಹಾಗೂ ಟ್ಯಾಂಕರ್ ನೀರು ಬಳಸಿ ಬೆಳೆದ ಬೆಳ್ಳುಳ್ಳಿಗೆ ಕ್ವಿಂಟಲ್‌ಗೆ 45,000 ರೂ. ವರೆಗೆ ಬೆಲೆ ಸಿಕ್ಕಿದ್ದು, ಕೆಲವು ಬೆಳೆಗಾರರಿಗೆ ಲಾಭ ತಂದುಕೊಟ್ಟಿದೆ.

ಕೃತಕ ಬೆಲೆ ಏರಿಕೆ ಆರೋಪ ಮತ್ತು ರೈತ ಮುಖಂಡರ ಆಕ್ರೋಶ

ಅನಿಯಂತ್ರಿತ ಸಂಗ್ರಹಣಾ ನೀತಿಯಿಂದಾಗಿ ದೊಡ್ಡ ಬಂಡವಾಳ ಹೊಂದಿರುವ ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡು (ಹೋರ್ಡಿಂಗ್), ಕೃತಕವಾಗಿ ಬೆಲೆ ಏರಿಕೆಗೆ ಕಾರಣವಾಗುತ್ತಿದ್ದಾರೆ ಎಂದು ‘ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟ’ದ ಸಂಚಾಲಕರಾದ ಬರಡನಪುರ ನಾಗರಾಜ್ ಆರೋಪಿಸಿದ್ದಾರೆ. ಬೆಳ್ಳುಳ್ಳಿಯನ್ನು ದೀರ್ಘಕಾಲ ಹಾಳಾಗದಂತೆ ಶೇಖರಿಸಿಡಲು ಸಾಧ್ಯವಿರುವುದರಿಂದ ದಾಸ್ತಾನು ದಂಧೆ ಹೆಚ್ಚಾಗಿದ್ದು, ಸರ್ಕಾರದ ನೀತಿ ವೈಫಲ್ಯವೇ ಇದಕ್ಕೆ ಕಾರಣ ಎಂದು ಅವರು ಕಿಡಿಕಾರಿದ್ದಾರೆ.

ಬೆಲೆ ಇಳಿಕೆ ಎಂದು?

ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಗುಜರಾತ್ ಹಾಗೂ ರಾಜಸ್ಥಾನದಿಂದ ಹೊಸ ದಾಸ್ತಾನು ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಆ ಸಂದರ್ಭದಲ್ಲಿ ರಾಜ್ಯಗಳ ನಡುವಿನ ಸರಬರಾಜು ಸುಧಾರಿಸಿ ಬೆಳ್ಳುಳ್ಳಿ ಬೆಲೆ ಇಳಿಕೆಯಾಗಬಹುದು ಎಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ, ಅಲ್ಲಿಯವರೆಗೆ ಗ್ರಾಹಕರು ಈ ಬೆಲೆ ಏರಿಕೆಯ ಬಷ್ಠವನ್ನು ಎದುರಿಸಬೇಕಿದೆ.
#GarlicPriceHike #BengaluruNews #YeswanthpurAPMC #UdayakalaExclusive #KarnatakaDrought #VegetablePrices #Inflation #AgricultureCrisis #UdayakalaNews

Related Posts

Leave a Reply

Your email address will not be published. Required fields are marked *