ನೀಟ್ ಅಕ್ರಮದಿಂದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು, ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಸೇರಿದಂತೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ದೆಹಲಿಗೆ ಮುನ್ನುಗ್ಗಲಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಹೇಳಿದೆ.
ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ, ನೀಟ್-ಯುಜಿ ಪರೀಕ್ಷಾ ಅಕ್ರಮ ಹಾಗೂ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ನಡೆಸಿದ ಸಂಸದ್ ಚಲೋ ರ್ಯಾಲಿ ಮೇಲೆ ಪೊಲೀಸ್ ಕ್ರೌರ್ಯದ ಬಗದ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಸಮಗ್ರ ಶಿಕ್ಷಣ ಸುಧಾರಣೆಗೆ ಆಗ್ರಹಿಸುತ್ತಿದೆ. ಸರ್ಕಾರ ಉಗ್ರ ನಿಗ್ರಹ ಕಾಯ್ದೆ ಅಥವಾ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ) ಪ್ರಕರಣ ದಾಖಲಿಸಿದರೂ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗದಿದ್ದರೆ ಲಕ್ಷಾಂತರ ಯುವಕರು ದೆಹಲಿಗೆ ಬಂದು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಇದು ಸ್ವಾತಂತ್ರ್ಯಾನಂತರ ಭಾರತದ ಅತಿದೊಡ್ಡ ಜನಾಂದೋಲನ ಆಗಿ ರೂಪುಗೊಳ್ಳಲಿದೆ ಎಂದು ಹೇಳಿದ್ದಾರೆ.
ದೆಹಲಿಯ ಸಂಸತ್ ಭವನ, ರಫಿ ಮಾರ್ಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮತ್ತು ಬ್ಯಾರಿಕೇಡ್ ಅಳವಡಿಸಲಾಗಿದೆ.
ಸಂಸತ್ ಚಲೋ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣಗಳಿಗೆ ಸಂಬಂಧಿಸಿ ಆರು ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಗೃಹ ಸಚಿವಾಲಯವು ತಕ್ಷಣವೇ ಹೆಚ್ಚುವರಿ 20 ಸಿಆರ್ಪಿಎಫ್ ತುಕಡಿಗಳನ್ನು ದೆಹಲಿಗೆ ನಿಯೋಜಿಸಿದೆ.


