Saturday, September 05, 2026
Menu

ನೀಟ್‌ ರದ್ದುಗೊಳಿಸಲು ಟಿವಿಕೆ, ಡಿಎಂಕೆ ಆಗ್ರಹ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಗಳ ಕುರಿತು ತಮಿಳುನಾಡಿನ ಆಡಳಿತಾರೂಢ ಟಿವಿಕೆ ವಿರೋಧ ಪಕ್ಷಗಳ ಸಾಲಿಗೆ ಸೇರ್ಪಡೆಗೊಂಡಿದೆ.  ವಿಜಯ್ ಸರ್ಕಾರ ತನ್ನ ಧ್ವನಿಯನ್ನು ತೀವ್ರಗೊಳಿಸಿದ್ದು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಮಾತ್ರವಲ್ಲದೆ, ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೇ ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಆಗ್ರಹಿಸಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ,ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಎತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರವು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ರದ್ದುಗೊಳಿಸುವುದರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರ್ಕಾರಗಳಿಗೇ ಸಂಪೂರ್ಣ ಅಧಿಕಾರ ನೀಡಬೇಕು ಎಂದೂ ಟಿವಿಕೆ ಒತ್ತಾಯಿಸಿದೆ. ದೆಹಲಿಯಲ್ಲಿ ನೀಟ್ ಪರವಾಗಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಮಧ್ಯೆ, ರಾಷ್ಟ್ರಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬುದೇ ತಮ್ಮ ಅಚಲ ಮತ್ತು ದೃಢವಾದ ನಿಲುವು ಎಂದು ತಮಿಳಗ ವೆಟ್ರಿ ಕಳಗಂ  ಸ್ಪಷ್ಟಪಡಿಸಿದೆ.

ವಿರೋಧ ಪಕ್ಷವಾದ ಡಿಎಂಕೆ ಹೆಸರನ್ನು ನೇರವಾಗಿ ಹೇಳದೆ ಗುರಿಯಾಗಿಟ್ಟುಕೊಂಡು ಟಿವಿಕೆ, ನಾವು ನೀಟ್ ಅನ್ನು ರದ್ದುಗೊಳಿಸುತ್ತೇವೆ ಎಂದು ಜನರಿಗೆ ಸುಳ್ಳು ಭರವಸೆ ನೀಡಿ ಮತಗಳಿಗಾಗಿ ವಂಚಿಸುವ ಮೋಸದ ರಾಜಕಾರಣದಲ್ಲಿ ತಾವು ಎಂದಿಗೂ ಭಾಗಿಯಾಗುವುದಿಲ್ಲ ಎಂದು ಹೇಳಿದೆ.

2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ ನೀಟ್  ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು.  ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸಂವಿಧಾನದ ಸಮವರ್ತಿ ಪಟ್ಟಿಯಿಂದ ಶಿಕ್ಷಣವನ್ನು ರಾಜ್ಯ ಪಟ್ಟಿಗೆ ವರ್ಗಾಯಿಸಬೇಕು ಎಂದು ಟಿವಿಕೆ ಆಗ್ರಹಿಸಿದೆ.

ಈ ವಿಚಾರದಲ್ಲಿ  ಯಾವುದೇ ಕಾನೂನು ಅಥವಾ ಕಾರ್ಯವಿಧಾನದ ತೊಡಕುಗಳಿದ್ದರೆ, ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವವರೆಗೆ ಅವುಗಳನ್ನು ಪರಿಹರಿಸುವವರೆಗೆ ಮಧ್ಯಂತರ ವ್ಯವಸ್ಥೆಯಾಗಿ ವಿಶೇಷ ಸಮವರ್ತಿ ಪಟ್ಟಿಯನ್ನು ರಚಿಸಬೇಕು ಎಂದು ಹೇಳಿದೆ. ಇದು ವೈದ್ಯಕೀಯ ಶಿಕ್ಷಣ ಸೇರಿದಂತೆ ಶಿಕ್ಷಣದ ಮೇಲಿನ ಸಂಪೂರ್ಣ ಅಧಿಕಾರ ರಾಜ್ಯಗಳಿಗೆ ಇರುವುದನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದೆ.

ಈ ನಿರ್ಧಾರ ಶಾಶ್ವತ ಮತ್ತು ಮಧ್ಯಂತರ ಪರಿಹಾರಕ್ಕಾಗಿ ನಮ್ಮ ದೂರದೃಷ್ಟಿಯಾಗಿದೆ. ಇತರರ ಶ್ರಮ, ಆಲೋಚನೆಗಳು ಮತ್ತು ಹೋರಾಟಗಳ ಮೇಲೆ ತಮ್ಮದೇ ಲೇಬಲ್ ಅಂಟಿಸಿಕೊಳ್ಳುವ ಅನೈತಿಕ ರಾಜಕಾರಣದಲ್ಲಿ
ತೊಡಗಿರುವವರು ತಕ್ಷಣವೇ ಟಿವಿಕೆಯನ್ನು ಟೀಕಿಸುವುದನ್ನು ನಿಲ್ಲಿಸಬೇಕು ಎಂದು ಪಕ್ಷ ಹೇಳಿದೆ.

ನೀಟ್ ವಿರುದ್ಧ ಬಲವಾದ ನಿಲುವು ತಳೆದಿರುವ ರಾಪ್ ಗಾಯಕ ತಿರುಕ್ಕುರಲ್ ಅರಿವು ಅವರನ್ನು ಟಿವಿಕೆ  ಬಂಧಿಸಿರುವ ಕ್ರಮಕ್ಕೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಟೀಕಿಸಿರುವ ಹಿನ್ನೆಲೆಯಲ್ಲಿ ಟಿವಿಕೆ ಈ ಹೇಳಿಕೆ ನೀಡಿದೆ.

ತಿರುಕ್ಕುರಲ್ ಅರಿವು ಅವರನ್ನು ಜುಲೈ 21ರಂದು ಚೆನ್ನೈನಲ್ಲಿರುವ ತಮಿಳುನಾಡು ಸಚಿವಾಲಯದ ಬಳಿ ಬಂಧಿಸಲಾಗಿತ್ತು. ನೀಟ್  ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಿಡುಗಡೆ ಬಳಿಕ ಅಲ್ಲಿನ ಸಿಎಂ ವಿಜಯ್‌ ಅರಿವು ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು.

Related Posts

Leave a Reply

Your email address will not be published. Required fields are marked *