ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆಗೆ ಬ್ರೇಕ್! ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿ, 11 ಮೆಟ್ರೋ ಸ್ಟೇಷನ್ ಬಂದ್
ನವದೆಹಲಿ: ಚುನಾವಣಾ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂದು (ಅ.2) ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯಬೇಕಿದ್ದ ಬೃಹತ್ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNS) ಸೆಕ್ಷನ್ 163ರ ಅಡಿಯಲ್ಲಿ ರಾಜಧಾನಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪೂರ್ವಾನುಮತಿ ಇಲ್ಲದೆ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವುದು, ಧರಣಿ, ಸಭೆ ಅಥವಾ ಮೆರವಣಿಗೆ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜತೆಗೆ ಘೋಷಣೆ ಕೂಗುವುದು, ಭಾಷಣ ಮಾಡುವುದು ಹಾಗೂ ಬ್ಯಾನರ್, ಲಾಠಿ, ಕೋಲು, ಕಲ್ಲು ಮುಂತಾದ ವಸ್ತುಗಳನ್ನು ಕೊಂಡೊಯ್ಯುವುದರ ಮೇಲೆಯೂ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರ ಸುರಕ್ಷತೆ, ಶಾಂತಿ-ಸುವ್ಯವಸ್ಥೆ ಹಾಗೂ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಡ್ರೋನ್ ಕಣ್ಣಾವಲು ; 11 ಮೆಟ್ರೋ ನಿಲ್ದಾಣಗಳು ಬಂದ್
ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಂತರ್ ಮಂತರ್ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಡ್ರೋನ್ಗಳ ಮೂಲಕ ಕಣ್ಗಾವಲು ಇರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಂತರ್ ಮಂತರ್ ಸಮೀಪದ 11 ಮೆಟ್ರೋ ನಿಲ್ದಾಣಗಳ ಬಾಗಿಲುಗಳನ್ನು ಮುಚ್ಚಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಆದೇಶ ಮೀರಿದ ಪ್ರತಿಭಟನೆ ನಡೆಸಲು ಯತ್ನಿಸಿದ ಎಎಪಿ (AAP) ನಾಯಕ ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್, ಆರ್ಜೆಡಿ (RJD) ಸೇರಿದಂತೆ ವಿವಿಧ ವಿರೋಧ ಪಕ್ಷಗಳು, ನಾಗರಿಕ ಸಮಾಜದ ಗುಂಪುಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಲು ಕರೆ ನೀಡಿದ್ದವು. ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA), ರಾಜ್ಯಸಭಾ ಸದಸ್ಯ ಮನೋಜ್ ಝಾ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
#UdayakalaNews #NewDelhi #Protest #GyaneshKumar #CEC #JantarMantar #DelhiPolice #Section163BNS #AAP #SaurabhBharadwaj #DelhiMetro #BreakingNewsKannada


