ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪ್ರದೇಶದ ಮಸೀದಿ ಬಳಿ ಬಾಂಬ್ ಸ್ಫೋಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿರುವ ಘಟನೆ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪೋಸ್ಟ್ ಮಾಡಿದ ಕಿಡಿಗೇಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
‘ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ, ಸಪೋರ್ಟ್ ಮಾಡಿ’ ಎಂದು ಶಂಕರ್11916 (shankar11916) ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡಿದ್ದು, ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತನಾಗಿ ಗುರುತಿಸಿಕೊಂಡು ಕೊಲೆಯಾಗಿದ್ದ ಸುಹಾಸ್ ಶೆಟ್ಟಿ ಅವರ ಭಾವಚಿತ್ರ ಹೊಂದಿದ್ದ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದ್ದ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿರುವ ಉಳ್ಳಾಲ ಪೊಲೀಸರು, ಆರೋಪಿಗಾಗಿ ಶೋಧ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಧಾರ್ಮಿಕ ದ್ವೇಷ ಹುಟ್ಟಿಸುವ, ಭಯ ಹುಟ್ಟಿಸುವ ಪೋಸ್ಟ್‌ಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು, ಪ್ರಚೋದನಕಾರಿ ಅಥವಾ ಭಯ ಹುಟ್ಟಿಸುವ ರೀತಿ ಪೋಸ್ಟ್ ಹಂಚಿಕೊಳ್ಳಬಾರದು ಎಂದು ಪೊಲೀಸ್ ಇಲಾಖೆ ಹೇಳಿದೆ.
ಇತ್ತೀಚೆಗೆ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಸೈಬರ್ ಕ್ರೈಂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ನಗರದ ಶಾಂತಿಗೆ ಭಂಗ ತರುವ ರೀತಿ ರೀಲ್ಸ್ ಮಾಡಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಅವಹೇಳನಕಾರಿ ಶಬ್ದ ಬಳಸಿ ಪೋಸ್ಟ್ ಮಾಡಿದ್ದ ಗುಂಪಿನ ವಿರುದ್ಧ ಕೆಲವು ತಿಂಗಳ ಹಿಂದೆ ನಗರ ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆಯಡಿ ಕ್ರಮದ ಎಚ್ಚರಿಕೆ ನೀಡಿದ್ದರು.
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೈಬರ್ ಪೊಲೀಸರು ಪ್ರತ್ಯೇಕ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಮೂಲಕ ನಿರಂತರ ನಿಗಾ ಇರಿಸಿದ್ದಾರೆ. ಪೋಸ್ಟ್ ಮಾಡಿದವರಷ್ಟೇ ಅಲ್ಲದೆ ಅಂತಹ ಪೋಸ್ಟ್‌ಗಳನ್ನು ಲೈಕ್ ಮಾಡುವ, ಶೇರ್ ಮಾಡುವ ಅಥವಾ ಪ್ರಚೋದನಕಾರಿ ಕಮೆಂಟ್ ಹಾಕುವವರ ವಿರುದ್ಧವೂ ಐಟಿ ಕಾಯ್ದೆ ಹಾಗೂ ಬಿಎನ್ಎಸ್ ಅಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.


