ಕಾಮಿಡಿ ಶೋ ನಿರೂಪಕ ಕಪಿಲ್ ಶರ್ಮಾ, ಬಾಲಿವುಡ್ ಕಾಮಿಡಿ ನಟ ರಾಜ್‌ಪಾಲ್ ಯಾದವ್ ಸೇರಿದಂತೆ ಒಟ್ಟು ನಾಲ್ವರು ಸೆಲೆಬ್ರೆಟಿಗಳಿಗೆ ಪಾಕಿಸ್ತಾನದಿಂದ ಇಮೇಲ್ ಮೂಲಕ ಜೀವ ಬೆದರಿಕೆ ಬಂದಿದ್ದು, ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಪಿಲ್ ಶರ್ಮಾ, ರಾಜ್‌ಪಾಲ್ ಯಾದವ್, ರೆಮೋ ಡಿಸೋಜಾ, ಸುಗಂಧ ಮಿಶ್ರಾಗೆ ಬೆದರಿಕೆ ಇಮೇಲ್ ಬಂದಿದೆ. ನಿಮ್ಮ ಇತ್ತೀಚಿನ ಎಲ್ಲಾ ಚಟುವಟಿಕೆಯನ್ನು ನಮ್ಮ ತಂಡ ಹತ್ತಿರದಿಂದ ಗಮನಿಸುತ್ತಿದೆ. ಹೀಗಾಗಿ ನಿಮಗೆ ಎಚ್ಚರಿಕೆ ನೀಡುತಿದ್ದೇವೆ. ಗಂಭೀರವಾಗಿ ಪರಿಗಣಿಸಿ ಈ ಸಂದೇಶವನ್ನು ಗೌರವಯುತವಾಗಿ ಕಾಣಬೇಕು, ರಹಸ್ಯವಾಗಿಡಬೇಕು ಎಂದು ಇಮೇಲ್ ಮೂಲಕ ಹೇಳಲಾಗಿದೆ. 8 ಗಂಟೆ ಸಮಯ ನೀಡುತ್ತೇವೆ. ಅಷ್ಟರೊಳಗೆ ಹಣ ನೀಡಿ ಪ್ರಕರಣ ಸುಖಾಂತ್ಯಗೊಳಿಸಿ ಎಂದು ಸೂಚಿಸಲಾಗಿದೆ. ಕೊನೆಯಲ್ಲಿ ಬಿಷ್ಣು ಎಂದು ಇಮೇಲ್‌ನಲ್ಲಿ ಬರೆಯಲಾಗಿದೆ.
ಅಂಬೋಲಿ ಪೊಲೀಸರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿದ್ದಾರೆ. ಇಮೇಲ್ ಕಳುಹಿಸಿರುವುದು ಪಾಕಿಸ್ತಾನದಿಂದ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನಟ ಸೈಫ್ ಆಲಿ ಖಾನ್ ಮೇಲಿನ ದಾಳಿ ಪ್ರಕರಣಕ್ಕೂ ಮೊದಲು ನಟ ಸಲ್ಮಾನ್ ಖಾನ್ ಮೇಲೆ ದಾಳಿ ಯತ್ನ ನಡೆಸಿ ಜೀವ ಬೆದರಿಕೆ ಒಡ್ಡಲಾಗಿತ್ತು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.