Menu

ಅಲ್ಪಸಂಖ್ಯಾತ ಮತ ಡಿಲೀಟ್ ಮಾಡಿಸಲು ಯತ್ನ ಬಿಜೆಪಿ ಮುಖಂಡ ರವಿ ಪಾಟೀಲ ಸೇರಿ 25 ಜನರ ವಿರುದ್ಧ ಕೇಸ್‌..!

ಅಲ್ಪಸಂಖ್ಯಾತ ಮತ ಡಿಲೀಟ್ ಮಾಡಿಸಲು ಯತ್ನ ಬಿಜೆಪಿ ಮುಖಂಡ ರವಿ ಪಾಟೀಲ ಸೇರಿ 25 ಜನರ ವಿರುದ್ಧ ಕೇಸ್‌..!

ಬೆಳಗಾವಿ: ಎಸ್ಐಆರ್​ ವಿಚಾರ ದೇಶ, ರಾಜ್ಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ಬೆಳಗಾವಿಯಲ್ಲೂ ಒಬ್ಬರಿಗೊಬ್ಬರು ಆರೋಪ – ಪ್ರತ್ಯಾರೋಪದಲ್ಲಿ ತೊಡಗಿದ್ದು, ಇಲ್ಲಿನ ಹೊಸ ವೀರಭದ್ರ ನಗರದಲ್ಲಿನ ಕೆಲವು ಅಲ್ಪಸಂಖ್ಯಾತ ಮತದಾರರನ್ನು ಎಸ್‌ಐಆರ್‌ನಿಂದ ತೆಗೆದುಹಾಕುವಂತೆ ಫಾರ್ಮ್‌ ನಂಬರ್‌–7 ಕೊಟ್ಟ ಆರೋಪದ ಮೇಲೆ ಬಿಜೆ‍ಪಿ ಮುಖಂಡ ಡಾ. ರವಿ ಪಾಟೀಲ ಸೇರಿದಂತೆ ಮೂವರು ಹಾಗೂ ಅಪರಿಚಿತ 25 ಮಂದಿಯ ವಿರುದ್ಧ ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸ ವೀರಭದ್ರನಗರದ ನಿವಾಸಿ, ಆಟೊ ಚಾಲಕ ಮೀರಾಸಾಬ್‌ ಸನದಿ (52) ದೂರು ನೀಡಿದವರು. ಶಂಕರ ಬೀರಪ್ಪ ನಾಯ್ಕ, ಪ್ರಶಾಂತ ದೀಪಕ ಮುಂದಿನಮನಿ ಹಾಗೂ ಡಾ. ರವಿ ಅವರನ್ನು ಎಫ್‌ಐಆರ್‌ನಲ್ಲಿ ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಆರೋಪಿಗಳಾಗಿ ಉಲ್ಲೇಖಿಸಲಾಗಿದೆ. ಡಾ. ರವಿ ಪಾಟೀಲ 2023ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರಕ್ಷೇತ್ರದ ಪರಾಜಿತ ಅಭ್ಯರ್ಥಿ. ಅಪರಿಚಿತ 20 ರಿಂದ 25 ಮಂದಿಯನ್ನೂ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.ಸಂಸದ ಜಗದೀಶ ಶೆಟ್ಟರ್ ಪ್ರತಿಕ್ರಿಯೆ (ETV Bharat)
ಸೆ.22ರಂದು ಮಧ್ಯಾಹ್ನ 2.30ರ ಸುಮಾರಿಗೆ ಹೊಸ ವೀರಭದ್ರನಗರದ ಏಳನೇ ಅಡ್ಡರಸ್ತೆಯಲ್ಲಿ ಘಟನೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರು ಘಟನೆಯನ್ನು ಖುದ್ದು ಕಂಡಿರುವುದಾಗಿ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ. ಲಿಖಿತ ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4), 336(3), 336(4), 353, 61(2), 3(5), 3(7), 192, 190 ಅಡಿ ಪ್ರಕರಣ ದಾಖಲಿಸಲಾಗಿದೆ.

198 ಮುಸ್ಲಿಂ ಮತದಾರರ ಗುರಿಯಾಗಿಸಿ ಡಿಲೀಟ್ ಮಾಡುವ ಒಳ ಸಂಚು ಮತ್ತು ನಕಲಿ ದಾಖಲಾತಿ, ಸುಳ್ಳು ಮಾಹಿತಿ ನೀಡಿದ ಆರೋಪ ಇವರ ವಿರುದ್ಧ ಕೇಳಿ ಬಂದಿದೆ. ಸೆ.22ರಂದು ವೀರಭದ್ರನಗರದ ಮತಗಟ್ಟೆ 195,196ರಲ್ಲಿ ಜೀವಂತವಾಗಿರುವ ಹಾಗೂ ಕಾನೂನುಬದ್ಧ ಇರುವ ಮತದಾರರ ಹೆಸರು ಡಿಲೀಟ್ ಮಾಡಿಸಲು ಆರೋಪಿಗಳು ಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ, ರವಿ ಪಾಟೀಲ್​​ ಸೇರಿ ಮೂವರನ್ನು ಸ್ಥಳೀಯರು ಹಿಡಿದಿದ್ದರು. ಫಾರ್ಮ್​ ನಂ.7ರ ಮೂಲಕ ಡಿಲೀಟ್ ಮಾಡಿಸಲು ಯತ್ನ ಆರೋಪ ಸಂಬಂಧ ಘಟನೆ ನಡೆದು ಎಂಟು ದಿನಗಳ ಬಳಿಕ ಎಫ್ಐಆರ್ ದಾಖಲಾಗಿದೆ.

ಸಂಸದ ಜಗದೀಶ ಶೆಟ್ಟರ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಎಸ್ಐಆರ್ ಪ್ರಕ್ರಿಯೆ ಮುಗಿದ ಮೇಲೆ ನಡೆದ ಚುನಾವಣೆಯಲ್ಲಿ ನೀವು ಗೆದ್ದು ಬಂದಿದ್ದೀರಿ ಎಂಬುದನ್ನು ರಾಜ್ಯ ಕಾಂಗ್ರೆಸ್ ಮರೆಯಬಾರದು. ಬಿಎಲ್ಎ 1, ಬಿಎಲ್ಎ 2 ಇರುವ ನಮ್ಮ ಬಿಜೆಪಿ ಕಾರ್ಯಕರ್ತರು ತಕರಾರು ಅರ್ಜಿ ಸಲ್ಲಿಸಿದರೆ ಅದೊಂದು‌ ಅಪರಾಧದಂತೆ ನೋಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಎಫ್ಐಆರ್ ದಾಖಲಿಸುವ ಕೆಲಸ ಆಗುತ್ತಿದೆ. ಬೆಳಗಾವಿಯಲ್ಲೂ ಡಾ. ರವಿ ಪಾಟೀಲ ಸೇರಿ ಮತ್ತಿತರ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದೊಂದು ರೀತಿ ಅಧಿಕಾರ ದುರ್ಬಳಕೆ, ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ಕೆಲಸ. ಅಭಯ್ ಪಾಟೀಲ ಅವರು ಕೂಡ ಅರ್ಜಿ ಸಲ್ಲಿಸಿ, ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ತಕರಾರರು ಅರ್ಜಿಯನ್ನೂ ಸಲ್ಲಿಸಬಾರದು ಎಂದರೆ ಅದು ಸರ್ವಾಧಿಕಾರಿ ಧೋರಣೆ ಆಗುತ್ತದೆ” ಎಂದು ಆರೋಪಿಸಿದರು.

“ನಮ್ಮ ಮುಖಂಡರು, ಕಾರ್ಯಕರ್ತರು ಕೊಟ್ಟಿರುವ ತಕರಾರನ್ನು ಪರಿಶೀಲನೆ ನಡೆಸಬೇಕು. ಅದರಲ್ಲಿ ಏನಾದರೂ ದೋಷ ಕಂಡು ಬಂದರೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಅದನ್ನು ಬಿಟ್ಟು ತಕರಾರು ಅರ್ಜಿ ಕೊಟ್ಟವರ ವಿರುದ್ಧವೇ ಎಫ್ಐಆರ್ ದಾಖಲಿಸುವುದನ್ನು ಬಿಡಬೇಕು. ಈ ಸಂಬಂಧ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ರಾಜ್ಯ ಬಿಜೆಪಿ ನಾಯಕರು ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ” ಎಂದು ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು.
#ಬೆಳಗಾವಿ #ಅಲ್ಪಸಂಖ್ಯಾತಮತದಾರರು #ಬಿಜೆಪಿ #ದೂರು #ರಾಜಕೀಯ #ಚುನಾವಣೆ #ನ್ಯಾಯ #fairelections #ಉದಯಕಾಲ

Related Posts

Leave a Reply

Your email address will not be published. Required fields are marked *