Saturday, November 21, 2026
Menu

ಬಸವ ಮಂಟಪ ಕೃತಿ ವಿವಾದ: ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲೇಖಕ ರವಿ ಹಂಜ್ ಪೊಲೀಸರ ವಶಕ್ಕೆ!

ಉದಯಕಾಲ ನ್ಯೂಸ್, ಬೆಂಗಳೂರು: 12ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ, ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಮತ್ತು ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿರುವ ಬಸವ ಮಂಟಪ ಕೃತಿಯ ಲೇಖಕ ರವಿ ಹಂಜ್ ಅವರನ್ನು ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಪೊಲೀಸರು ಜಾರಿಗೊಳಿಸಿದ್ದ ಲುಕ್‌ಔಟ್ ನೋಟಿಸ್ ಆಧಾರದ ಮೇಲೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಈ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ತಡೆದು ವಶಕ್ಕೆ ಪಡೆದ ಭದ್ರತಾ ಪಡೆ

ಲೇಖಕ ರವಿ ಹಂಜ್ ಅವರ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ರವಿ ಹಂಜ್ ಅವರು ತನಿಖಾಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಮೆರಿಕ ನಿವಾಸಿಯಾಗಿರುವ ಅವರು ವಿದೇಶಕ್ಕೆ ತೆರಳುವ ಅಥವಾ ದೇಶ ತೊರೆಯುವ ಸಾಧ್ಯತೆ ಇದೆ ಎಂಬ ಬಲವಾದ ಶಂಕೆಯ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೆಟ್ ಠಾಣೆಯ ಪೊಲೀಸರು ಈ ಹಿಂದೆಯೇ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು.

ಇಂದು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಿ ಹಂಜ್ ಆಗಮಿಸಿದ ವೇಳೆ, ವಲಸೆ ಹಾಗೂ ಭದ್ರತಾ ತಪಾಸಣಾ ಅಧಿಕಾರಿಗಳಿಗೆ ಲುಕ್‌ಔಟ್ ನೋಟಿಸ್ ಕುರಿತು ಎಚ್ಚರಿಕೆ ಸಂದೇಶ ರವಾನೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕೊಚ್ಚಿ ಏರ್‌ಪೋರ್ಟ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ,ರವಿ ಹಂಜ್ ಅವರ ಪ್ರಯಾಣವನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿ ಪೊಲೀಸರಿಗೆ ಮಾಹಿತಿ ರವಾನೆ, ಮುಂದಿನ ಕಾನೂನು ಪ್ರಕ್ರಿಯೆ

ರವಿ ಹಂಜ್ ಅವರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಕೊಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಗೆ ಅಧಿಕೃತವಾಗಿ ಮಾಹಿತಿ ರವಾನಿಸಿದ್ದಾರೆ. ಸದ್ಯ ಬೆಳಗಾವಿ ಪೊಲೀಸರ ವಿಶೇಷ ತಂಡವು ಕೊಚ್ಚಿಗೆ ತೆರಳುವ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ರವಿ ಹಂಜ್ ಅವರನ್ನು ತಮ್ಮ ವಶಕ್ಕೆ ಪಡೆದು ಬೆಳಗಾವಿಗೆ ಕರೆತರುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಏನಿದು ‘ಬಸವ ಮಂಟಪ’ ಪ್ರಕರಣ

ಇತ್ತೀಚೆಗೆ ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಲೇಖಕ ರವಿ ಹಂಜ್ ಅವರು ಬರೆದಿರುವ ಸುಮಾರು 600 ಪುಟಗಳ ಬಸವ ಮಂಟಪ ಕೃತಿ ಬಿಡುಗಡೆಯಾಗಿತ್ತು. ಪುಸ್ತಕದ ಬಿಡುಗಡೆಗೂ ಮುನ್ನ ಹಾಗೂ ನಂತರ ಯೂಟ್ಯೂಬ್ ವಾಹಿನಿಯೊಂದರ ಸಂದರ್ಶನದಲ್ಲಿ ರವಿ ಹಂಜ್ ಅವರು ವಿಶ್ವಗುರು ಬಸವಣ್ಣನವರು, ಶರಣ ಪರಂಪರೆ ಮತ್ತು ವಚನ ಸಾಹಿತ್ಯದ ಕುರಿತು ಅತ್ಯಂತ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಂಶೋಧನೆಯ ಹೆಸರಿನಲ್ಲಿ ಬಸವಣ್ಣನವರ ಚಾರಿತ್ರ್ಯವಧೆ ಮಾಡಲಾಗಿದೆ ಎಂದು ಆರೋಪಿಸಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ ಸೇರಿದಂತೆ ವಿವಿಧ ಶರಣ ಸಂಘಟನೆಗಳು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಿದ್ದವು.

ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಬಸವಣ್ಣನವರ ಕುರಿತ ಅವಹೇಳನಕಾರಿ ಬರಹ ಮತ್ತು ಹೇಳಿಕೆಗಳಿಂದ ಲಕ್ಷಾಂತರ ಭಕ್ತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ, ಬೆಂಗಳೂರಿನಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲೂ ಲೇಖಕ ರವಿ ಹಂಜ್ ಹಾಗೂ ಕೃತಿಯ ಪ್ರಕಾಶಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಕೃತಿ ಮುಟ್ಟುಗೋಲಿಗೆ ರಾಜ್ಯ ಸಚಿವ ಸಂಪುಟದ ಮಹತ್ವದ ನಿರ್ಧಾರ

ಈ ವಿವಾದವು ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಾಗೂ ಪಕ್ಷಾತೀತವಾಗಿ ಜನಪ್ರತಿನಿಧಿಗಳು, ಮಠಾಧೀಶರು ಮತ್ತು ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿತ್ತು. ಕರ್ನಾಟಕದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಲ್ಪಟ್ಟಿರುವ ಬಸವಣ್ಣನವರಿಗೆ ಮಾಡುವ ಅಪಮಾನವು ಇಡೀ ನಾಡಿಗೆ ಮಾಡುವ ಅಪಮಾನವಾಗಿದೆ ಎಂದು ಪ್ರತಿಪಾದಿಸಿದ್ದ ಸರ್ಕಾರ, ವಿವಾದಿತ ‘ಬಸವ ಮಂಟಪ’ ಕೃತಿಯ ಎಲ್ಲಾ ಪ್ರತಿಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿತ್ತು.

ಕ್ಷಮೆಯಾಚನೆ ವಿಡಿಯೋ ಬೆನ್ನಲ್ಲೇ ಬಂಧನದ ಬಲೆ

ವಿವಾದ ತೀವ್ರಗೊಂಡು ಪೊಲೀಸ್ ಪ್ರಕರಣಗಳು ದಾಖಲಾದ ಬೆನ್ನಲ್ಲೇ, ರವಿ ಹಂಜ್ ಅವರು ವಿಡಿಯೋವೊಂದನ್ನು ಬಿಡುಗಡೆ ಮಾಡಿ, ತಮ್ಮ ಹೇಳಿಕೆಯಿಂದ ವೀರಶೈವ-ಲಿಂಗಾಯತ ಬಂಧುಗಳಿಗೆ ನೋವುಂಟಾಗಿದ್ದರೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದರು. ಆದರೆ, ಇದೇ ವಿಡಿಯೋದಲ್ಲಿ ಕೃತಿಯನ್ನು ಪ್ರತಿ ಜಿಲ್ಲೆಯಲ್ಲೂ ಮರುಬಿಡುಗಡೆ ಮಾಡುವುದಾಗಿ ಹೇಳಿದ್ದು ಸಮುದಾಯದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತ್ತು. ಬಸವ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಕೇವಲ ಕ್ಷಮೆಯಾಚನೆಯನ್ನು ಒಪ್ಪಲು ಸಾಧ್ಯವಿಲ್ಲ, ಲೇಖಕರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿದ್ದವು. ಇದೀಗ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಪೊಲೀಸರ ವಶವಾಗಿರುವುದು ಪ್ರಕರಣಕ್ಕೆ ನಿರ್ಣಾಯಕ ತಿರುವು ನೀಡಿದೆ.
#RaviHanj #BasavaMantapa #KochiAirport #BelagaviPolice #Basavanna #KarnatakaNews #LookoutNotice #LingayatCommunity #BreakingNews #UdayakalaNews

Related Posts

Leave a Reply

Your email address will not be published. Required fields are marked *