ನೀಟ್ ಅಕ್ರಮದ ತನಿಖೆ, ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದ 26 ದಿನಗಳಿಂದ ಉಪವಾಸ ನಿರತರಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಕೇಂದ್ರವು ನೀಡಿದ ಭರವಸೆಗಳ ಹಿನ್ನೆಲೆ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ.
ವಾಂಗ್ಚುಕ್ ಬೆಂಬಲಿಸಿ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿಯಲಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಗುರ್ಗಾಂವ್‌ನ ಮೆಡಾಂಟಾ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸೋನಂ ವಾಂಗ್ಚುಕ್ ಅವರನ್ನು ಭೇಟಿ ಮಾಡಿ ಸರ್ಕಾರದ ಪರವಾಗಿ ಹಲವು ಭರವಸೆಗಳನ್ನು ನೀಡಿದ್ದಾರೆ. ಲಡಾಖ್‌ನ ಅಪೆಕ್ಸ್ ಬಾಡಿ ಹಿರಿಯ ನಾಯಕರು, ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಹಾಗೂ ವೈದ್ಯರ ಸಮ್ಮುಖದಲ್ಲಿ ಸೋನಂ 26 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು.
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಹಾಗೂ ಲಡಾಖ್ ಅಪೆಕ್ಸ್ ಬಾಡಿಯ ಹಿರಿಯ ನಾಯಕರ ಸಮ್ಮುಖದಲ್ಲಿ 26 ದಿನಗಳ ಉಪವಾಸ ಅಂತ್ಯಗೊಳಿಸಿದ್ದೇನೆ. ಹಲವು ಷರತ್ತುಗಳ ಕುರಿತು ದೀರ್ಘ ಮಾತುಕತೆ ನಡೆದಿದ್ದು, ದೇಶದಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆಯದಂತೆ ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಎಲ್ಲ ವಿವರಗಳನ್ನು ಶೀಘ್ರದಲ್ಲೇ ಪ್ರತ್ಯೇಕ ವೀಡಿಯೊದಲ್ಲಿ ಹಂಚಿಕೊಳ್ಳುತ್ತೇನೆ. ಯಾವುದೇ ರೀತಿಯ ಹಿಂಸಾಚಾರಕ್ಕೆ ಅವಕಾಶ ನೀಡಬೇಡಿ ಎಂದು ಎಕ್ಸ್ ಪೋಸ್ಟ್ ಮೂಲಕ ಸೋನಂ ಮನವಿ ಮಾಡಿದ್ದಾರೆ.
ಉಪವಾಸದ ಅವಧಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ 65ಕ್ಕೂ ಹೆಚ್ಚು ಸಂಸದರು ಭೇಟಿ ಮಾಡಿ ಅಥವಾ ಪತ್ರದ ಮೂಲಕ ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದರು ಎಂದು ಸೋನಂ ತಿಳಿಸಿದ್ದಾರೆ.
ಪ್ರಧಾನಿ ಮೋದಿ. ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಸೋನಂಜಿ ವೈದ್ಯರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಲಿ. ಅವರು ಶೀಘ್ರವೇ ಆರೋಗ್ಯವನ್ನು ಮರಳಿ ಪಡೆದು ಕಳೆದುಕೊಂಡ ತೂಕವನ್ನು ಕೂಡ ಬೇಗನೆ ಹೊಂದಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಶಿಕ್ಷಣ ಇಲಾಖೆ ಕಾರ್ಯದರ್ಶಿ ಎತ್ತಂಗಡಿ
ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳ ನಡುವೆಯೇ ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯನ್ನು ಎತ್ತಂಗಡಿ ಮಾಡಲಾಗಿದೆ. ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ಹುದ್ದೆಯಿಂದ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ ಅವರನ್ನು ನೇಮಕ ಮಾಡಲಾಗಿದೆ.
ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ ಆದೇಶದ ಪ್ರಕಾರ, ವಿನೀತ್ ಜೋಶಿ ಅವರನ್ನು ತಕ್ಷಣದಿಂದಲೇ ಶಿಕ್ಷಣ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದ್ದು, ಶಿಕ್ಷಣ ಸಚಿವಾಲಯದ ಹೊಸ ಕಾರ್ಯದರ್ಶಿಯಾಗಿ ನರೇಶ್ ಪಾಲ್ ಗಂಗ್ವಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


