ಮದುವೆಗಳಿಗೆ ಅತಿಥಿಯಂತೆ ಹೋಗಿ ಮಕ್ಕಳನ್ನು ಮಾತನಾಡಿಸಿ ಮುದ್ದು ಮಾಡಿ ಚಿನ್ನ ಎಗರಿಸುತ್ತಿದ್ದ ಕಳ್ಳನನ್ನು ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೀಣ್ಯ ಎರಡನೇ ಹಂತದ ನಿವಾಸಿ ಎಚ್.ಕೆ. ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತ. ಆರೋಪಿಯಿಂದ 5.5 ಲಕ್ಷ ರೂ.. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಥಣಿಸಂದ್ರ ಮುಖ್ಯರಸ್ತೆಯ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹೋಗಿ ಏಳು ವರ್ಷದ ಬಾಲಕಿಯನ್ನು ಮಾತಾಡಿಸುವ ನೆಪದಲ್ಲಿ ಚಿನ್ನದ ಸರ ದೋಚಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಚಿಕ್ಕಮಳೂರಿನ ಹೊನ್ನನಾಯಕನಹಳ್ಳಿ ಗ್ರಾಮದ ಬಾಬು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಮದುವೆಗಳಲ್ಲಿ ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದವನು. ಈತನ ವಿರುದ್ಧ ನಗರದ ನಾನಾ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಮದುವೆಗಳಿಗೆ ಅತಿಥಿಯಂತೆ ನಟಿಸುತ್ತ ಹೋಗಿ ಮಕ್ಕಳನ್ನು ಮುದ್ದಿಸುವ ನೆಪದಲ್ಲಿ ಮಾತನಾಡಿಸಿ ಗಮನ ಬೇರೆಡೆ ಸೆಳೆದು ಅವರು ಧರಿಸಿರುವ ಚಿನ್ನವನ್ನು ಎಗರಿಸುತ್ತಿದ್ದ. ವರ-ವಧುವಿನ ಕೋಣೆಗಳಿಗೆ ಹೋಗಿ ಕೈಗೆ ಸಿಕ್ಕಿದ್ದನ್ನು ಕಳವು ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಫೆ.8 ರಂದು ಥಣಿಸಂದ್ರ ಮುಖ್ಯರಸ್ತೆಯ ಇಬಿಸಿ ಕಲ್ಯಾಣ ಮಂಪಟದಲ್ಲಿ ಏಳು ವರ್ಷದ ಬಾಲಕಿಯ ನೆಕ್ಲೇಸ್ ಹಾಗೂ ಬಳೆಗಳು ಸೇರಿದಂತೆ 70 ಗ್ರಾಮ್ ಚಿನ್ನಾಭರಣ ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


