ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ತೀವ್ರಗೊಂಡಿದೆ. ಇರಾನ್‌ನ ಮೂರು ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದ ಅಮೆರಿಕ, ಮತ್ತೊಮ್ಮೆ ವಾಯುದಾಳಿ ನಡೆಸಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ.
ಬುಶೆಹರ್‌ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರ ಪ್ರದೇಶ ಹಾಗೂ ಇರಾನ್‌ನ ಚಬಹಾರ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದ ಕಾರಣ ಇರಾನ್ ಭೂಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.
ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದ ಅಂತ್ಯವಾಗುವ ಸೂಚನೆ ಜೊತೆ ದಾಳಿಯ ಎಚ್ಚರಿಕೆ ನೀಡಿದ್ದಾರೆ. ಆ ಎಚ್ಚರಿಕೆಯ ಬೆನ್ನಲ್ಲೇ ಹೊಸ ದಾಳಿ ನಡೆದಿದೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ನಡೆಯಲಿರುವ ದಿನವೇ ಈ ದಾಳಿ ನಡೆದಿದೆ ಎಂಬುದು ಗಮನಾರ್ಹ.
ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೊಲ್ಲಿ ಪ್ರದೇಶದಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಅಮೆರಿಕದ ಒಂದು ದಾಳಿಗೆ ನಾವು ಎರಡು ದಾಳಿಗಳನ್ನು ನಡೆಸುತ್ತೇವೆ ಎಂಬ ಕಠಿಣ ಎಚ್ಚರಿಕೆ ಕೂಡ ಇರಾನ್ ನೀಡಿದೆ. ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಲು ಅಮೆರಿಕ ಯತ್ನಿಸಿದರೆ, ಅಮೆರಿಕದ ಒಬ್ಬ ಸೈನಿಕನೂ ಜೀವಂತವಾಗಿ ಹಿಂದಿರುಗುವುದಿಲ್ಲ ಎಂದು ಬಹಿರಂಗ ಎಚ್ಚರಿಕೆ ಇರಾನ್ ಕಡೆಯಿಂದ ಬಂದಿದೆ.
ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಅಸ್ಥಿರತೆ ಇದ್ದು, ಈಗಿನ ಸನ್ನಿವೇಶ ಜಾಗತಿಕ ಮಟ್ಟದಲ್ಲೂ ಆತಂಕ ಹುಟ್ಟಿಸಿವೆ. ಪರಮಾಣು ಸ್ಥಾವರ ಪ್ರದೇಶಗಳ ಮೇಲೆ ದಾಳಿ ನಡೆಯುತ್ತಿರುವುದು ಪರಿಸರ ಹಾಗೂ ಅಂತರರಾಷ್ಟ್ರೀಯ ಭದ್ರತೆ ವಿಚಾರದಲ್ಲೂ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ದಾಳಿ-ಪ್ರತಿದಾಳಿಗಳು ಭೀಕರ ಯುದ್ಧಕ್ಕೆ ಹಾದಿಯಾಗುವ ಸಾಧ್ಯತೆ ಇದೆ.


