ರಾಷ್ಟ್ರದ ನಾಗರಿಕನಾಗಿರುವ ರಾಜ್ಯದ ಯಾವುದೇ ಪ್ರಜೆಗೆ ತನ್ನ ಮತದಾನದ ಹಕ್ಕನ್ನು ಅನಾವಶ್ಯಕವಾಗಿ ಕಸಿದುಕೊಳ್ಳುವಂತಹ ಪ್ರಕ್ರಿಯೆ ನಡೆದರೆ, ಅಂತಹ ಪ್ರಕ್ರಿಯೆಯಿಂದ ನಾಗರೀಕನ ಮತದಾನದ ಹಕ್ಕನ್ನು ಕಾಪಾಡಲು ಸರ್ವಪ್ರಯತ್ನಗಳನ್ನು ಮಾಡಲು ಚಿಂತನೆ ನಡೆಸಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪಟ್ಟಿಗಳ ಮತದಾರರ ವಿಶೇಷ ತೀವು ಪರಿಷ್ಕರಣೆ (Special Intensive Revision – SIR) ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಧೀರ್ಘ ಚರ್ಚೆಗಳು ನಡೆದವು. ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಎಸ್ ಐ ಆರ್ ಪ್ರಕ್ರಿಯೆಯಿಂದ 27 ಲಕ್ಷ ಜನರ ಮತದ ಹಕ್ಕು ಕಸಿಯಲಾಯಿತು. ಎಸ್ ಐ ಆರ್ ನ ಅವಘಡಗಳು ಮತ್ತು ಗಂಭೀರ ಆಕ್ಷೇಪಗಳ ಬಗ್ಗೆ ಚರ್ಚಿಸಲಾಗಿ, ಈ ವಿಷಯದ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟೆಲೇರುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.
ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆ, ಅನುಮೋದನೆಗಳು
ಅಂತಿಮ ಮತದಾರರ ಪಟ್ಟಿ , ಎಸ್ ಐ ಆರ್ ಪ್ರಕ್ರಿಯೆ, ಅದರ ಪಾರದರ್ಶಕತೆಗೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಮತ್ತಷ್ಟು ವಿವರವಾದ ಚರ್ಚೆಗಳನ್ನು ನಡೆಯಬೇಕಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಣಯ ಕೈಗೊಳ್ಳಲಾಗುವುದು ಎಂದರು. ದಿನಾಂಕ: 21-05-2026ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಮುಖ್ಯಾಂಶಗಳು ಎನ್.ಜಿ.ಇ.ಎಫ್ (ಹುಬ್ಬಳ್ಳಿ) ಲಿ., ಸಂಸ್ಥೆಗೆ ನೀಡಿದ ದುಡಿಯುವ ಬಂಡವಾಳ ರೂಪದ ಸಾಲ ರೂ.2 ಕೋಟಿಗಳು ಮತ್ತು ಅದರ ಮೇಲಿನ ಬಡ್ಡಿ ರೂ.4 ಕೋಟಿಗಳು ಸೇರಿ ಒಟ್ಟು ರೂ.6 ಕೋಟಿಗಳು ಹಾಗೂ ರೂ.10 ಕೋಟಿಗಳ ಬಡ್ಡಿ ರಹಿತ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವುದಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ MCH ನಿರ್ಮಾಣ ಆಸ್ಪತ್ರೆ ಅಂದಾಜು ಮೊತ್ತದಲ್ಲಿ ಕಾಮಗಾರಿಗಳನ್ನು ಒಟ್ಟಾರೆ ರೂ.38 ಕೋಟಿಗಳ ಕೈಗೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ನಮ್ಮ ಕ್ಲಿನಿಕ್ಗಳಿಗೆ ಅವಶ್ಯವಿರುವ ಪ್ರಯೋಗಾಲಯ ಉಪಭೋಗ್ಯಗಳನ್ನು (RD KIT) ಮತ್ತು ವಿವಿಧ ಉಪಕರಣಗಳನ್ನು ರೂ.22 ಕೋಟಿಗಳ ಅಂದಾಜು ಮೊತ್ತದಲ್ಲಿ 15 ಹಣಕಾಸು ಆಯೋಗದ ಅನುದಾನದಲ್ಲಿ ಖರೀದಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಬೆಂಗಳೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಜಮೀನಿನಲ್ಲಿ Dealership Model ಮಾದರಿಯಲ್ಲಿ M/s Indian Oil Corporation Ltd., (IOCL) ಸಂಸ್ಥೆಯ ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸುವ ಬಗ್ಗೆ ಸಚಿವ ಸಂಪುಟ ಒಪ್ಪಿಗೆ ನೀಡಿತು.
ಧಾರವಾಡ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಜಮೀನಿನಲ್ಲಿ Dealership Model ಮಾದರಿಯಲ್ಲಿ M/s Hindustan Petroleum Corporation Ltd (HPCL) ಸಂಸ್ಥೆಯ ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಬೆಳಗಾವಿ ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಜಮೀನಿನಲ್ಲಿ M/s Bharath Petroleum Corporation Ltd., (BPCL) ಸಂಸ್ಥೆಯ ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಕೋರಮಂಡಲ್ ಶುಗರ್ಸ್ ಲಿಮಿಟೆಡ್ ಇವರಿಗೆ ಮಂಜೂರಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಸ.ನಂ. 119, ಹೊಸ ಸ.ನಂ. 151 ರಲ್ಲಿನ 100 ಎಕರೆ ಜಮೀನನ್ನು ಶ್ರೀ ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್ ನ ಸಮೂಹ ಕಂಪನಿಯಾದ ಮೆ. ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್ಗೆ ಮಾರಾಟ ಮಾಡಲು ಕೆಲವು ಷರತ್ತುಗಳ ಜೊತೆಗೆ ಅನುಮತಿ ನೀಡಲಾಗಿದೆ. 32 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(GTTC) ಗಳಲ್ಲಿ ಹೊಸ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ರೂ.90.00 ಕೋಟಿಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕನಕಪುರ ನಗರಸಭೆ ವ್ಯಾಪ್ತಿಯಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (UIDF) ಯೋಜನೆಯ ಟ್ರಾಂಚ್-2 ರಡಿ ರೂ.20.00 ಕೋಟಿಗಳ ಅಂದಾಜು ಮೊತ್ತದಲ್ಲಿ ಮಳೆ ನೀರು ಚರಂಡಿ ಕಾಮಗಾರಿಗಳನ್ನು ನಿರ್ಮಾಣ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. * ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಲೀಕತ್ವದಲ್ಲಿರುವ ಹಾಗೂ ಬಡಾವಣೆಯಲ್ಲಿರುವ ಪ್ರಾಧಿಕಾರದ ಉದ್ಯಾನವನ/ ಬಯಲು ಜಾಗಕ್ಕೆ ಕಾಯ್ದಿರಿಸಿರುವ ಮೈಸೂರು ಜಿಲ್ಲೆ ಸಾತಗಳ್ಳಿ ಗ್ರಾಮದ ಸ.ನಂ. 85, 88, 106 ಹಾಗೂ 107ರಲ್ಲಿನ ಕೆರೆ ಜಾಗವನ್ನು ಹೊರತುಪಡಿಸಿ 17.35 ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮೈಸೂರು ಜಿಲ್ಲೆ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟದ ಹತ್ತಿರ ಕಬಿನಿ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಕಾಮಗಾರಿಯನ್ನು ರೂ.15.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಮಂಡ್ಯ ಜಿಲ್ಲೆ, ನಾಗಮಂಗಲ ವ್ಯಾಪ್ತಿಯಲ್ಲಿನ ಬೆಳ್ಳೂರು ಹೋಬಳಿಯ ದಾಸನಕೆರೆ ಅಭಿವೃದ್ಧಿ ಹಾಗೂ ವಿದ್ಯುದ್ದೀಕರಣ ಕಾಮಗಾರಿಗಳನ್ನು ರೂ.25 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.


