ಉದಯಕಾಲ ನ್ಯೂಸ್, ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದ್ದು, ನಾಳೆ (ಅಕ್ಟೋಬರ್ 13) ನಡೆಯಲಿರುವ ಬಹುನಿರೀಕ್ಷಿತ ‘ಯುವ ದಸರಾ’ ಕಾರ್ಯಕ್ರಮವನ್ನು ಉದ್ಘಾಟಿಸಲು ಮೈಸೂರಿಗೆ ಆಗಮಿಸಿರುವ ಖ್ಯಾತ ಬಹುಭಾಷಾ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ್ (Prabhu Deva) ಅವರು ಇಂದು ತಮ್ಮ ತಾಯಿಯೊಂದಿಗೆ ಐತಿಹಾಸಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಸುತ್ತೂರು ಮಠದಲ್ಲಿ ಧಾರ್ಮಿಕ ವಿಧಿವಿಧಾನ ಹಾಗೂ ಆಶೀರ್ವಾದ
ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಆಗಮಿಸಿದ ನಟ ಪ್ರಭುದೇವ್ ಅವರು ಮಠದ ಹಿರಿಯ ಪೂಜ್ಯರನ್ನು ಭೇಟಿ ಮಾಡಿ ವಿಶೇಷ ನಮಸ್ಕಾರ ಸಲ್ಲಿಸಿದರು. ತಾಯಿಯೊಂದಿಗೆ ದೇವರ ದರ್ಶನ ಪಡೆದು, ಮಠದ ಗುರುಗಳ ಆಶೀರ್ವಾದ ಪಡೆದರು. ಈ ವೇಳೆ ಮಠದ ವತಿಯಿಂದ ಅವರನ್ನು ಗೌರವಿಸಲಾಯಿತು.
ಮೈಸೂರು ನನ್ನ ಜನ್ಮಭೂಮಿ – ನಟ ಪ್ರಭುದೇವ್ ಭಾವುಕ ನುಡಿ
ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಪ್ರಭುದೇವ್, ಮೈಸೂರು ದಸರಾದ ಬಗ್ಗೆ ತಮ್ಮಲ್ಲBರುವ ಅಪಾರ ಒಲವನ್ನು ಹಂಚಿಕೊಂಡರು.”ಮೈಸೂರು ನನ್ನ ಜನ್ಮಭೂಮಿ, ನನಗೆ ಚಿಕ್ಕ ವಯಸ್ಸಿನಿಂದಲೂ ದಸರಾ ಅಂದರೆ ಅಚ್ಚುಮೆಚ್ಚು. ಕಳೆದ ಎರಡು ವರ್ಷಗಳಿಂದ ದಸರಾವನ್ನು ಪರಿಪೂರ್ಣವಾಗಿ ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದೆ, ಆದರೆ ಕೆಲಸದ ಒತ್ತಡದಿಂದ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ತಾಯಿ ಚಾಮುಂಡೇಶ್ವರಿಯ ಕೃಪಕಟಾಕ್ಷದಿಂದ ದಸರಾ ವೀಕ್ಷಿಸುವ ಭಾಗ್ಯ ಒಲಿದುಬಂದಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿಯ ಯುವದಸರಾ ಉದ್ಘಾಟನೆಗೆ ನನಗೆ ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಸಮಿತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದರು.
ನಾಳೆ ಅದ್ದೂರಿಯಾಗಿ ಆರಂಭವಾಗಲಿರುವ ಯುವದಸರಾ
ಮೈಸೂರು-ನಂಜನಗೂಡು ರಸ್ತೆಯ ಉತ್ತನಹಳ್ಳಿ ಬಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಾಲಯದ ಆವರಣದಲ್ಲಿರುವ ವಿಶಾಲ ಮೈದಾನದಲ್ಲಿ ಯುವದಸರಾ 2026 ಕಾರ್ಯಕ್ರಮವು ಅಕ್ಟೋಬರ್ 13 ರಿಂದ 17ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ನಾಳೆ ಸಂಜೆ ನಟ ಪ್ರಭುದೇವ್ ಅವರು ಈ ಯುವ ಸಂಭ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ದಿನದಂದು ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಹಾಗೂ ಬಳಗದವರಿಂದ ಹೈ-ವೋಲ್ಟೇಜ್ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ನಟ ಪ್ರಭುದೇವ್ ಮೈಸೂರಿಗೆ ಆಗಮಿಸಿರುವುದು ಹಾಗೂ ಅವರು ಯುವ ದಸರಾವನ್ನು ಉದ್ಘಾಟಿಸುತ್ತಿರುವುದು ಕನ್ನಡಿಗರಲ್ಲಿ ಹಾಗೂ ಯುವಜನತೆಯಲ್ಲಿ ಮತ್ತಷ್ಟು ಉತ್ಸಾಹವನ್ನು ಇಮ್ಮಡಿಸಿದೆ.
#MysuruDasara2026 #YuvaDasara #PrabhuDeva #SutturuMutt #MysoreNews #Sandalwood #Uttanahalli #KarnatakaTourism #DasaraFestival #UdayakalaNews


