Saturday, November 14, 2026
Menu

ಅಕ್ರಮ ಮರಳು ದಂಧೆಗೆ ಸಾಥ್‌: ನಂಗಲಿ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಅಮಾನತು!

ಉದಯಕಾಲ ನ್ಯೂಸ್‌, ಕೋಲಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಕ್ರಮ ಮರಳು ದಂಧೆ ಮಿತಿಮೀರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಹಾಗೂ ಮಾಫಿಯಾಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂಬ ಗಂಭೀರ ಆರೋಪದ ಮೇರೆಗೆ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬರಗಾಲದಿಂದ ಕೆರೆ-ಕಟ್ಟೆಗಳು ಬತ್ತಿಹೋಗಿರುವ ಸಂದರ್ಭದಲ್ಲೂ ಮರಳು ಕಳ್ಳರು ಕೆರೆಗಳನ್ನು ಬಗೆದು ನಾಶ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಎಎಸ್‌ಪಿ ದಿಢೀರ್ ದಾಳಿ: ಸಿಕ್ಕಿಬಿದ್ದ ಅಕ್ರಮ ಫಿಲ್ಟರ್ ಮರಳು ಅಡ್ಡೆ!

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ದೊಡ್ಡಕೆರೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ, ಸರ್ಕಾರದ ಕಣ್ಣುತಪ್ಪಿಸಿ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳು ಫಿಲ್ಟರ್ ಅಡ್ಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮುಳಬಾಗಿಲು ಎಎಸ್‌ಪಿ ಮೋನಿಷಾ ಅವರು ಶುಕ್ರವಾರ ರಾತ್ರಿ ನಂಗಲಿ ದೊಡ್ಡಕೆರೆ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಅಕ್ರಮವಾಗಿ ಮರಳು ತೆಗೆಯಲು ಬಳಸುತ್ತಿದ್ದ ಒಂದು ಜೆಸಿಬಿ ಮತ್ತು ಸಾಗಾಣಿಕೆಗೆ ಇರಿಸಿದ್ದ ಒಂದು ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯ ಠಾಣಾ ಪೊಲೀಸರ ಕಣ್ತಾವಲು ತಪ್ಪಿಸಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ.

ಎಎಸ್‌ಪಿ ವರದಿ ಆಧರಿಸಿ ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಕಠಿಣ ಕ್ರಮ

ಎಎಸ್‌ಪಿ ಮೋನಿಷಾ ಅವರು ನಡೆಸಿದ ದಾಳಿಯ ತರುವಾಯ, ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಈ ಅಕ್ರಮ ಚಟುವಟಿಕೆಗಳ ಬಗ್ಗೆ ಸ್ಪಷ್ಟ ವರದಿಯನ್ನು ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರಿಗೆ ಸಲ್ಲಿಸಿದ್ದರು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು, ಕರ್ತವ್ಯಲೋಪ ಹಾಗೂ ಅಕ್ರಮ ಮರಳು ಮಾಫಿಯಾಗೆ ಪರೋಕ್ಷ ಬೆಂಬಲ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ ವಿದ್ಯಾಶ್ರೀ ಹಾಗೂ ಠಾಣೆಯ ಎಸ್‌ಬಿ ಕಾನ್‌ಸ್ಟೇಬಲ್ ಪ್ರವೀಣ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಇಂತಹ ಕಾನೂನುಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯಲು ಅವಕಾಶ ಮಾಡಿಕೊಟ್ಟಿದ್ದ ಅಧಿಕಾರಿಗಳ ವಿರುದ್ಧದ ಈ ಕಠಿಣ ಕ್ರಮವು ಕೋಲಾರ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.
#KolarNews #SandMafia #NangaliPSI #Suspended #KolarPolice #Udayakala #IllegalSandMining #KarnatakaNews

Related Posts

Leave a Reply

Your email address will not be published. Required fields are marked *