Wednesday, October 21, 2026
Menu

ಮೈಸೂರು ದಸರಾ ಕೇಕ್ ಶೋನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ಕೇಕಿನಲ್ಲೊಂದು ನಮನ!

ಉದಯಕಾಲ ನ್ಯೂಸ್, ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವು ತನ್ನ ಪರಂಪರೆ, ಸಂಸ್ಕೃತಿ ಮತ್ತು ಕಲಾ ವೈಭವದಿಂದ ಎಂದೆಂದಿಗೂ ವಿಶಿಷ್ಟ. ಈ ಬಾರಿಯ ದಸರಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿರುವ ‘ದಸರಾ ಕೇಕ್ ಪ್ರದರ್ಶನ’ ಸಾರ್ವಜನಿಕರ ಮನ ಸೆಳೆಯುತ್ತಿದ್ದು, ಇಲ್ಲಿ ಇತಿಹಾಸ, ಪ್ರಕೃತಿಯ ಜೊತೆಗೆ ದೇಶದ ಹೆಮ್ಮೆಯ ಸಾಹಸಿಯೊಬ್ಬರ ಕಥೆಯನ್ನು ಕೇಕಿನ ಮೂಲಕ ಅನಾವರಣಗೊಳಿಸಲಾಗಿದೆ.

ಆಕಾಶದಲ್ಲೇ ನಡೆದ ಅನಿರೀಕ್ಷಿತ ಸಾಹಸಮಯ ಸವಾಲನ್ನು ಧೈರ್ಯದಿಂದ ಎದುರಿಸಿ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಕಮರ್ಷಿಯಲ್ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Smit Machchhar) ಅವರ ಅಪ್ರತಿಮ ಶೌರ್ಯಕ್ಕೆ ಈ ಬಾರಿಯ ಕೇಕ್ ಶೋನಲ್ಲಿ ವಿಶೇಷ ಗೌರವಾರ್ಪಣೆ ಸಲ್ಲಿಸಲಾಗಿದೆ.

 ವಿಮಾನದಲ್ಲಿದ್ದ ಆ ಭಯಾನಕ ಕ್ಷಣ ಮತ್ತು ಸಾಹಸದ ಕಥೆ

ಕೆಲ ದಿನಗಳ ಹಿಂದೆ ದುಬೈನಿಂದ ತೆಲಾವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ (Flydubai Flight) ಸಹ-ಪೈಲಟ್‌ನಿಂದ ಅನಿರೀಕ್ಷಿತ ಹಲ್ಲೆ ಹಾಗೂ ಅಪಾಯಕಾರಿ ಪರಿಸ್ಥಿತಿ ಎದುರಾಗಿತ್ತು. ತೀವ್ರ ಸ್ವರೂಪದ ಗಾಯಗಳಾಗSದರೂ ಎದೆಗುಂದದ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಅತ್ಯಂತ ಸಂಯಮ ಹಾಗೂ ಸಾಹಸದಿಂದ ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ (Emergency Landing) ಮಾಡುವಲ್ಲಿ ಯಶಸ್ವಿಯಾಗಿದ್ದರು. ಪ್ರಯಾಣಿಕರ ಜೀವ ಉಳಿಸಲು ಅವರು ತೋರಿಸಿದ ಈ ದಿಟ್ಟತನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಮೈಸೂರು ದಸರಾದಲ್ಲಿ ಈ ಸಾಹಸಗಾಥೆಯನ್ನು ಕೇಕ್ ಕಲಾಕೃತಿಯ ಮೂಲಕ ರೂಪಿಸಿರುವುದು ಎಲ್ಲರ ದೇಶಭಕ್ತಿಯನ್ನು ಬಡಿದೆಬ್ಬಿಸಿದೆ.

ಮೈಸೂರು ವೈಭವ, ಇತಿಹಾಸ ಹಾಗೂ ಪ್ರಕೃತಿ ಸಿರಿ

ಮಹಾರಾಜ ಕಾಲೇಜು ಮೈದಾನದ ಎದುರು ನಡೆಯುತ್ತಿರುವ ಈ ಕೇಕ್ ಪ್ರದರ್ಶನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯದ ಸ್ಮರಣೆಯಷ್ಟೇ ಅಲ್ಲದೆ, ನಾಡಿನ ದಸರಾ ಇತಿಹಾಸ ಬಿಂಬಿಸುವ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ
ಕೃಷ್ಣರಾಜ ಒಡೆಯರ್ ಅವರ ಕಾಲದ ಐತಿಹಾಸಿಕ ಜಗನ್ಮೋಹನ ಅರಮನೆಯ ಸುಂದರ ವಿನ್ಯಾಸದ ಬೃಹತ್ ಕೇಕ್ ಮತ್ತು ಮೈಸೂರು ಸಂಸ್ಥಾನದಲ್ಲಿ ಮಹಿಳಾ ಶಿಕ್ಷಣಕ್ಕೆ ಭದ್ರುನೇವ ಹಾಕಿದ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಕೊಡುಗೆಯನ್ನು ಸ್ಮರಿಸುವ ವಿಶೇಷ ಕೇಕ್ ಕಲಾಕೃತಿ ಹಾಗೂ ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳ ಆಕರ್ಷಕ ಕರಕುಶಲ ಕೇಕ್ ವಿನ್ಯಾಸಗಳು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಿವೆ.

ಒಂದೇ ವೇದಿಕೆಯಲ್ಲಿ ಐತಿಹಾಸಿಕ ಪರಂಪರೆ, ಪ್ರಕೃತಿ ಪ್ರೇಮ ಹಾಗೂ ಆಧುನಿಕ ಕಾಲದ ನೈಜ ನಾಯಕನೊಬ್ಬನ ಧೈರ್ಯದ ಸಾಹಸಗಾಥೆಯನ್ನು ಬಿಂಬಿಸುತ್ತಿರುವ ಈ ಬಾರಿಯ ಕೇಕ್ ಪ್ರದರ್ಶನವು ಮೈಸೂರು ದಸರೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.
#MysuruDasara #DasaraCakeShow #CaptainSmitMachchhar #UdayakalaNews #MysuruPalace
#BravePilot #DasaraSpecial

Related Posts

Leave a Reply

Your email address will not be published. Required fields are marked *