Menu

ಅಲ್ಬೇನಿಯಾದಲ್ಲಿ ವಿದ್ಯಾರ್ಥಿಗಳ ಆಕ್ರೋಶ: ಸರ್ಕಾರಿ ಕಚೇರಿಗಳಿಗೆ ಬೆಂಕಿ, ಹಿಂಸಾಚಾರದಲ್ಲಿ 130 ಪೊಲೀಸರಿಗೆ ಗಾಯ!

ತಿರಾನಾ: ನಿರುದ್ಯೋಗದ ಸಮಸ್ಯೆ, ಗಗನಕ್ಕೇರುತ್ತಿರುವ ಶಿಕ್ಷಣ ವೆಚ್ಚ, ಆರ್ಥಿಕ ಮುಗ್ಗಟ್ಟು ಮತ್ತು ವ್ಯಾಪಕ ಭ್ರಷ್ಟಾಚಾರವನ್ನು ವಿರೋಧಿಸಿ ಯುರೋಪಿಯನ್ ರಾಷ್ಟ್ರವಾದ ಅಲ್ಬೇನಿಯಾದಲ್ಲಿ (Albania) ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಕರ ಪ್ರತಿಭಟನೆ ಸಂಪೂರ್ಣವಾಗಿ ಹಿಂಸಾರೂಪಕ್ಕೆ ತಿರುಗಿದೆ. ದೇಶದ ದೀರ್ಘಕಾಲದ ಪ್ರಧಾನಿ ಎಡಿ ರಾಮಾ (Edi Rama) ಅವರ ರಾಜೀನಾಮೆಗೆ ಆಗ್ರಹಿಸಿ ರಾಜಧಾನಿ ತಿರಾನಾದಲ್ಲಿ (Tirana) ರೊಚ್ಚಿಗೆದ್ದ ಪ್ರತಿಭಟನಾಕಾರರು ದೇಶದ ಉನ್ನತ ಸಾಂವಿಧಾನಿಕ ಸಂಸ್ಥೆಯಾದ ಸುಪ್ರೀಂ ಕೋರ್ಟ್ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ಭೀಕರ ದಾಂಧಲೆ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್, ಶಿಕ್ಷಣ ಸಚಿವಾಲಯ ಹಾಗೂ ಬ್ಯಾಂಕ್ ಆಫ್ ಅಲ್ಬೇನಿಯಾ ಮೇಲೆ ದಾಳಿ

ಅಕ್ಟೋಬರ್ 17ರಂದು ಉಲ್ಬಣಗೊಂಡ ಈ ಪ್ರತಿಭಟನೆಯು ಮಿತಿಯನ್ನು ಮೀರಿತು. ಸಾವಿರಾರು ಸಂಖ್ಯೆಯಲ್ಲಿ ನುಗ್ಗಿದ ಆಕ್ರೋಶಭರಿತ ವಿದ್ಯಾರ್ಥಿಗಳು ಮತ್ತು ಯುವಕರು ನೇರವಾಗಿ ದೇಶದ ಸುಪ್ರೀಂ ಕೋರ್ಟ್ ಕಟ್ಟಡದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದರು. ಕಚೇರಿಯ ಗಾಜುಗಳನ್ನು ಪುಡಿಪುಡಿ ಮಾಡಿ ಒಳಗೆ ನುಗ್ಗಲು ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ಹತೋಟಿಗೆ ತಂದರು.

ಕೇವಲ ಸುಪ್ರೀಂ ಕೋರ್ಟ್ ಮಾತ್ರವಲ್ಲದೆ, ಬ್ಯಾಂಕ್ ಆಫ್ ಅಲ್ಬೇನಿಯಾದ ಪ್ರವೇಶ ದ್ವಾರ ಹಾಗೂ ಪ್ರಮುಖವಾಗಿ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಶಿಕ್ಷಣ ಸಚಿವಾಲಯದ ಕಟ್ಟಡಗಳ ಮೇಲೂ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಯಿತು. ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಭದ್ರತಾ ಪಡೆಗಳಿಂದ ಟಿಯರ್‌ ಗ್ಯಾಸ್ ಮತ್ತು ರಬ್ಬರ್ ಗುಂಡುಗಳ ಪ್ರಯೋಗ

ಪ್ರತಿಭಟನಾಕಾರರನ್ನು ನಿಯಂತ್ರಿಸಲು ತಿರಾನಾ ಪೊಲೀಸರು ಮತ್ತು ವಿಶೇಷ ಭದ್ರತಾ ಪಡೆಗಳು ಹರಸಾಹಸ ಪಡಬೇಕಾಯಿತು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು (Tear Gas), ಜಲಫಿರಂಗಿ (Water Cannons) ಹಾಗೂ ರಬ್ಬರ್ ಗುಂಡುಗಳನ್ನು ಪ್ರಯೋಗಿಸಿದರು. ಈ ಭೀಕರ ಘರ್ಷಣೆ ಹಾಗೂ ಕಲ್ಲು ತೂರಾಟದಲ್ಲಿ ಬರೋಬ್ಬರಿ 130ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಧಾನಿ ಎಡಿ ರಾಮಾ ವಿರುದ್ಧ ತಿರುಗಿಬಿದ್ದ ಯುವ ಜನತೆ

ಕಳೆದ ಒಂದು ದಶಕದಿಂದ ಅಲ್ಬೇನಿಯಾವನ್ನು ಆಳುತ್ತಿರುವ ಪ್ರಧಾನಿ ಎಡಿ ರಾಮಾ ಅವರ ಆಡಳಿತದಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ವಿಪರೀತವಾಗಿ ಹೆಚ್ಚಿದೆ. ಯುವಕರಿಗೆ ಉದ್ಯೋಗಾವಕಾಶಗಳಿಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ದುಬಾರಿಯಾಗುತ್ತಿರುವ ಶಿಕ್ಷಣ ಮತ್ತು ಜೀವನ ನಿರ್ವಹಣೆಯಿಂದ ಬೇಸತ್ತ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಸರ್ಕಾರದ ದಮನಕಾರಿ ನೀತಿಗಳು ಹಾಗೂ ಆರ್ಥಿಕ ವೈಫಲ್ಯವೇ ಇಂದಿನ ಈ ಜನಾಕ್ರೋಶಕ್ಕೆ ನೇರ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಲ್ಬೇನಿಯಾ ನ್ಯಾಯಾಂಗ ಸಚಿವ ಟೋನಿ ಗೋಗು, “ಇದು ಕೇವಲ ಸರ್ಕಾರದ ಮೇಲಿನ ಆಕ್ರೋಶವಲ್ಲ; ಬದಲಿಗೆ ದೇಶದ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವದ ಮೇಲೆಯೇ ನಡೆದಿರುವ ನೇರ ಹಾಗೂ ಅಕ್ಷಮ್ಯ ದಾಳಿಯಾಗಿದೆ” ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ರಾಜಧಾನಿ ತಿರಾನಾದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಸರ್ಕಾರಿ ವೃತ್ತಗಳಲ್ಲಿ ಭಾರಿ ಪೊಲೀಸ್ ಪಡೆ ಹಾಗೂ ಸೇನೆಯನ್ನು ನಿಯೋಜಿಸಲಾಗಿದೆ.
#AlbaniaProtests #TiranaRiots #EdiRama #SupremeCourtAttack #StudentProtest #InternationalNews #UdayakalaNews #GlobalUnrest #AlbaniaCrisis

Related Posts

Leave a Reply

Your email address will not be published. Required fields are marked *