ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪಿ, ತುಮಕೂರಿನ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ ಬಳಿಕ ಬಂಧಿಸಲಾಗಿದೆ.
ಪ್ರಕರಣದ ವೀಡಿಯೊ ವೈರಲ್ ಆಗುತ್ತಿದ್ದಂತೆ ಆರೋಪಿ ರಾಮಚಂದ್ರ ತಲೆ ಮರೆಸಿಕೊಂಡಿದ್ದರು. ಗೃಹ ಸಚಿವರ ತವರು ಜಿಲ್ಲೆಯ ಪಾವಗಡದಿಂದ ದೂರು ನೀಡಲು ಬಂದಿದ್ದ ಮಹಿಳೆಯ ಜೊತೆ ರಾಮಚಂದ್ರ ಅಸಭ್ಯವಾಗಿ ನಡೆದುಕೊಂಡ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಮಾನತು ಮಾಡಿ ಡಿಜಿ, ಐಜಿಪಿ ಅಲೋಕ್ ಮೋಹನ್ ಆದೇಶಿಸಿದ್ದರು.
ಇದೀಗ ಆರೋಪಿ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಷನ್ 68,75,79 ಅಡಿಯಲ್ಲಿ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ನೀಡಲು ಬಂದ ಮಹಿಳೆಯ ಅಸಹಾಯಕತೆಯನ್ನೇ ದುರುಪಯೋಗಪಡಿಸಿಕೊಂಡ ಪೊಲೀಸ್ ಅಧಿಕಾರಿಯ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅದೇ ರೀತಿ ಇಡೀ ಪೊಲೀಸ್ ಇಲಾಖೆಗೂ ಮುಜುಗರವುಂಟು ಮಾಡಿದೆ.