ಬೆಂಗಳೂರು: ಸ್ಪೇಸ್ ಡಾಕಿಂಗ್ ಮಾಡುವ ಪ್ರಯೋಗದಲ್ಲಿ ಆರಂಭಿಕ ಯಶಸ್ಸು ಕಂಡಿರುವ ಇಸ್ರೋ ಐತಿಹಾಸಿಕ ಸಾಧನೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಮಾನವರಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರ ರವಾನೆ ಸೇರಿದಂತೆ ಹಲವು ಯೋಜನೆಗಳಿಗೆ ಸ್ಪೇಸ್ ಡಾಕಿಂಗ್ ಅತ್ಯವಶ್ಯಕವಾಗಿದೆ. ಈ ಪ್ರಯೋಗದಲ್ಲಿ ಆರಂಭಿಕ ಯಶಸ್ಸು ದೊರೆತಿದೆ. ಮುಂದಿನ ದಿನಗಳಲ್ಲಿ ಸ್ಪೇಸ್ ಡಾಕಿಂಗ್ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ನಮ್ಮ ರಾಜ್ಯದ ಹೆಮ್ಮೆಯಾಗಿರುವ ಇಸ್ರೋ ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ. ಇದೇ ರೀತಿಯ ಸಾಧನೆಗಳ ಮೂಲಕ 2025 ರಲ್ಲಿ ಇಸ್ರೋ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಗುರಿಯನ್ನು ಮುಟ್ಟುವಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.