ಉದಯಕಾಲ ನ್ಯೂಸ್, ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಅಕ್ರಮ ಚಿನ್ನ ಕಳ್ಳಸಾಗಣೆ ಮತ್ತು ವಿದೇಶದಿಂದ ನಿಷೇಧಿತ ಸಿಂಥೆಟಿಕ್ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಮಂಗಳೂರು ಪ್ರಾದೇಶಿಕ ಘಟಕದ ಅಧಿಕಾರಿಗಳು ಭೇದಿಸಿದ್ದಾರೆ.
ಮೂರು ಪ್ರತ್ಯೇಕ ಹಾಗೂ ಮಿಂಚಿನ ಕಾರ್ಯಾಚರಣೆಗಳನ್ನು ನಡೆಸಿರುವ ಅಧಿಕಾರಿಗಳು ಒಟ್ಟು ₹3.77 ಕೋಟಿ ಮೌಲ್ಯದ ಸುಮಾರು 2.95 ಕೆ.ಜಿ ವಿದೇಶಿ ಚಿನ್ನ, ₹73 ಲಕ್ಷ ನಗದು, ಕೃತ್ಯಕ್ಕೆ ಬಳಸಿದ ವಾಹನಗಳು ಹಾಗೂ 1.33 ಕೆ.ಜಿ ನಿಷೇಧಿತ ಆಂಫೆಟಮೈನ್ ಮಾದಕವಸ್ತುವನ್ನು ಜಪ್ತಿ ಮಾಡಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಮಂಗಳೂರು ಡಿಆರ್ಐ ಉಪ ನಿರ್ದೇಶಕ ಕಂಕಣಾಲ ಅನಿಲ್ ಕುಮಾರ್ ಅವರು ಅಧಿಕೃತ ಮಾಧ್ಯಮ ಪ್ರಕಟಣೆಯ ಮೂಲಕ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ.
ಶೌಚಾಲಯದ ಮೂಲಕ ಚಿನ್ನ ಸಾಗಾಟ – ₹2 ಕೋಟಿ ಚಿನ್ನ, ₹73 ಲಕ್ಷ ನಗದು ಜಪ್ತಿ
ದುಬೈ ಮತ್ತು ಕೇರಳದ ಕಾಸರಗೋಡು ಮೂಲದ ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರೊಂದಿಗೆ ಶಾಮೀಲಾಗಿ, ಮಂಗಳೂರು ವಿಮಾನ ನಿಲ್ದಾಣದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಚಿನ್ನ ಕಳ್ಳಸಾಗಣೆಗೆ ನೇರವಾಗಿ ನೆರವಾಗುತ್ತಿರುವ ಬಗ್ಗೆ ಡಿಆರ್ಐ ಅಧಿಕಾರಿಗಳಿಗೆ ಖಚಿತ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಆಗಮಿಸುವ ಅಪರಿಚಿತ ಪ್ರಯಾಣಿಕರು ವಿಮಾನ ನಿಲ್ದಾಣದ ವಲಸೆ ಕೌಂಟರ್ ಸಮೀಪದ ಶೌಚಾಲಯದಲ್ಲಿ ಚಿನ್ನವನ್ನು ಅಡಗಿಸಿಡುತ್ತಿದ್ದರು. ನಂತರ ಈ ಹೊರಗುತ್ತಿಗೆ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಹೊರತೆಗೆದು ಹೊರಗಿರುವ ಸಾಗಣೆದಾರರಿಗೆ ತಲುಪಿಸುವ ತಂತ್ರ ಅನುಸರಿಸುತ್ತಿದ್ದರು.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ
ಖಚಿತ ಮಾಹಿತಿಯ ಮೇರೆಗೆ ನವೆಂಬರ್ 23ರ ಬೆಳಗ್ಗೆ ವಿಮಾನ ನಿಲ್ದಾಣದ ಆಗಮನ ಸಭಾಂಗಣದಲ್ಲಿ ಮಫ್ತಿಯಲ್ಲಿ ಕಣ್ಗಾವಲು ಇರಿಸಿದ್ದ ಡಿಆರ್ಐ ಅಧಿಕಾರಿಗಳು, ಶೌಚಾಲಯದಿಂದ ಪೇಸ್ಟ್ ರೂಪದಲ್ಲಿದ್ದ ಎರಡು ಆಯತಾಕಾರದ ಚಿನ್ನದ ಗಟ್ಟಿಗಳನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಹೊರಗುತ್ತಿಗೆ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬಂಧಿತ ಸಿಬ್ಬಂದಿ ಆ ಚಿನ್ನವನ್ನು ಕಾಸರಗೋಡು ಮೂಲದ ಮತ್ತೊಬ್ಬ ವಿಮಾನ ನಿಲ್ದಾಣದ ಸಿಬ್ಬಂದಿಗೆ ಹಸ್ತಾಂತರಿಸಿ, ವಿಮಾನ ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿ ವಾಹನದೊಂದಿಗೆ ಕಾಯುತ್ತಿದ್ದ ಕಾಸರಗೋಡಿನ ಮೂರನೇ ವ್ಯಕ್ತಿಗೆ ತಲುಪಿಸಲು ಸಂಚು ರೂಪಿಸಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಉಳಿದಿಬ್ಬರನ್ನೂ ಬಂಧಿಸಿ ತೀವ್ರ ಶೋಧ ನಡೆಸಿದಾಗ, ಚಿನ್ನ ಕಳ್ಳಸಾಗಣೆ ಹಾಗೂ ಅಕ್ರಮ ಹವಾಲಾ ವಹಿವಾಟಿಗೆ ಸಂಬಂಧಿಸಿದ ₹73 ಲಕ್ಷ ನಗದು ಪತ್ತೆಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 1.65 ಕೆ.ಜಿ ವಿದೇಶಿ ಮೂಲದ ಚಿನ್ನ (ಅಂದಾಜು ಮೌಲ್ಯ ₹2 ಕೋಟಿ), ₹73 ಲಕ್ಷ ನಗದು, ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್ ಕಾಯ್ದೆ-1962ರ ಅಡಿ ಮೂವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ದೇಹದ ಒಳಭಾಗದಲ್ಲಿ ಚಿನ್ನ ಅಡಗಿಸಿ ತಂದ ಕಾಸರಗೋಡಿನ ಇಬ್ಬರ ಬಂಧನ
ಇದಕ್ಕೂ ಮುನ್ನ ನವೆಂಬರ್ 14ರಂದು ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡು ಮೂಲದ ಇಬ್ಬರು ಪ್ರಯಾಣಿಕರ ವರ್ತನೆಯ ಮೇಲೆ ಸಂಶಯಗೊಂಡ ಅಧಿಕಾರಿಗಳು ತೀವ್ರ ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳು ತಮ್ಮ ದೇಹದ ಒಳಭಾಗದಲ್ಲಿ (ಗುದದ್ವಾರದಲ್ಲಿ) ಐದು ಕ್ಯಾಪ್ಸೂಲ್ಗಳಲ್ಲಿ ಪೇಸ್ಟ್ ರೂಪದ ವಿದೇಶಿ ಚಿನ್ನವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿತ್ತು. ವೈದ್ಯಕೀಯ ನೆರವಿನೊಂದಿಗೆ ಅವುಗಳನ್ನು ಹೊರತೆಗೆದು ಸಂಸ್ಕರಿಸಿದಾಗ ₹1.77 ಕೋಟಿ ಮೌಲ್ಯದ 1,306 ಗ್ರಾಂ (1.30 ಕೆ.ಜಿ) ಶುದ್ಧ ಚಿನ್ನ ಲಭ್ಯವಾಗಿದ್ದು, ಕಸ್ಟಮ್ಸ್ ಕಾಯ್ದೆಯಡಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ಮೊದಲ ಬಾರಿಗೆ ವಿದೇಶಿ ಸಿಂಥೆಟಿಕ್ ಡ್ರಗ್ಸ್ ಪತ್ತೆ!
ಮತ್ತೊಂದು ಆಘಾತಕಾರಿ ಕಾರ್ಯಾಚರಣೆಯಲ್ಲಿ, ಡಿಆರ್ಐ ನೀಡಿದ ನಿಖರ ಮಾಹಿತಿಯ ಮೇರೆಗೆ ಮಂಗಳೂರು ಕಸ್ಟಮ್ಸ್ ಮತ್ತು ಡಿಆರ್ಐ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಮಸ್ಕತ್ನಿಂದ ಮಂಗಳೂರಿಗೆ ಬಂದಿಳಿದ ಕಾಸರಗೋಡು ಮೂಲದ ಪ್ರಯಾಣಿಕನೊಬ್ಬನನ್ನು ತಪಾಸಣೆ ನಡೆಸಿದ್ದಾರೆ. ಆತನ ಚೆಕ್-ಇನ್ ಬ್ಯಾಗೇಜ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ತಿಂಡಿಯ ಚಿಪ್ಸ್ ಪ್ಯಾಕೆಟ್ಗಳ ಒಳಗೆ ಅತ್ಯಂತ ಚಾಣಾಕ್ಷತನದಿಂದ ಬಚ್ಚಿಟ್ಟಿದ್ದ 14 ಸಣ್ಣ ಪ್ಯಾಕೆಟ್ಗಳಲ್ಲಿ 1,333 ಗ್ರಾಂ (1.33 ಕೆ.ಜಿ) ಹರಳಿನ ರೂಪದ ಮಾದಕವಸ್ತು ಪತ್ತೆಯಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದ ಸಿಂಥೆಟಿಕ್ ಮಾದಕವಸ್ತುಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲ ಪ್ರಕರಣವಾಗಿದೆ. ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಮಂಗಳೂರು ಡಿಆರ್ಐ ಉಪ ನಿರ್ದೇಶಕ ಕಂಕಣಾಲ ಅನಿಲ್ ಕುಮಾರ್ ತಿಳಿಸಿದ್ದಾರೆ.
ವಶಪಡಿಸಿಕೊಂಡ ವಸ್ತುವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ಅತ್ಯಂತ ಅಪಾಯಕಾರಿ ಹಾಗೂ ನಿಷೇಧಿತ ಆಂಫೆಟಮೈನ್ ಸಿಂಥೆಟಿಕ್ ಡ್ರಗ್ಸ್ ಎಂಬುದು ದೃಢಪಟ್ಟಿದೆ. ತಕ್ಷಣ ಮುಂದುವರಿದ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ವಿದೇಶದಲ್ಲಿ ಈ ಮಾದಕವಸ್ತುವನ್ನು ಪ್ರಯಾಣಿಕನಿಗೆ ಹಸ್ತಾಂತರಿಸಿದ್ದ ಕೇರಳದ ಮುನ್ನಾರ್ ಮೂಲದ ಮತ್ತೊಬ್ಬ ಆರೋಪಿಯನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರೂ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆ-1985ರ ಕಠಿಣ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದ್ದು, ಈ ಜಾಲದ ಹಿಂದಿರುವ ಇತರ ಕಿಂಗ್ಪಿನ್ಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಲಾಗಿದೆ.
#Udayakala #MangaluruAirport #DRIRaid #GoldSmuggling #SyntheticDrugs #AmphetamineSeizure #MangaluruNews #Kasaragod #CustomsIndia #CrimeNewsKannada #MangaluruInternationalAirport #NDPSAct #CoastalKarnatakaNews

