ಉದಯಕಾಲ ನ್ಯೂಸ್, ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಹಾಸನ ಮೂಲದ ಗಡಿ ಭದ್ರತಾ ಪಡೆ (BSF) ಯೋಧರೊಬ್ಬರು ಚಂಡೀಗಢದಲ್ಲಿ ನಿಧನರಾಗಿರುವ ಘಟನೆ ವರದಿಯಾಗಿದೆ. ಹಾಸನ ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದವರಾದ ಕುಮಾರಸ್ವಾಮಿ (42) ಮೃತ ಯೋಧರಾಗಿದ್ದು, ಅವರ ಅಕಾಲಿಕ ನಿಧನವು ಕುಟುಂಬದಲ್ಲಿ ಹಾಗೂ ತವರೂಪದಲ್ಲಿ ತೀವ್ರ ಶೋಕಮೂಡಿಸಿದೆ.
ಸೇವಾವಧಿ ವಿಸ್ತರಣೆ ಹಾಗೂ ಅನಾರೋಗ್ಯದ ಹಿನ್ನೆಲೆ
ಕುಮಾರಸ್ವಾಮಿಯವರು ತಮ್ಮ ನಿಗದಿತ ಸೇವಾವಧಿ ಮುಗಿದಿದ್ದರೂ ದೇಶದ ಸೇವೆಗಾಗಿ ಹೆಚ್ಚುವರಿ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರು ಇತ್ತೀಚೆಗೆ ಪಿತೃಪಕ್ಷ ಹಬ್ಬದ ನಿಮಿತ್ತ ಊರಿಗೆ ಬಂದಿದ್ದ ವೇಳೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದರು. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸ್ವಲ್ಪ ಮಟ್ಟಿಗೆ ಗುಣಮುಖರಾದ ಬಳಿಕ ಅವರು ಮತ್ತೆ ಕರ್ತವ್ಯಕ್ಕೆ ವಾಪಸ್ ತೆರಳಿದ್ದರು. ಆದರೆ, ಚಂಡೀಗಢದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಮರಳಿ ಅನಾರೋಗ್ಯ ಕಾಣಿಸಿಕೊಂಡಿದ್ದು, ಕೂಡಲೇ ಅಲ್ಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 11ರ ಸಂಜೆ 6 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಪಾರ್ಥಿವ ಶರೀರ ಆಗಮನ ಹಾಗೂ ಗಣ್ಯರಿಂದ ಅಂತಿಮ ನಮನ
ಮೃತ ಯೋಧ ಕುಮಾರಸ್ವಾಮಿ ಅವರ ಪಾರ್ಥಿವ ಶರೀರವನ್ನು ನವೆಂಬರ್ 13ರಂದು ಬೆಳಿಗ್ಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತರಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಸ್ಪಿ ಶುಭನ್ವಿತಾ ಹಾಗೂ ಮಾಜಿ ಯೋಧರ ಸಂಘದ ಅಧ್ಯಕ್ಷ ನಾಗೇಶ್ ಸೇರಿದಂತೆ ಹಲವರು ಆಗಮಿಸಿ ಮೃತ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ಮೃತ ಕುಮಾರಸ್ವಾಮಿ ಅವರು ಜಮ್ಮು, ಪಶ್ಚಿಮ ಬಂಗಾಳ, ನಾಗ್ಪುರ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು. ಹಾಸನದ ವಿಜಯನಗರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಅವರು, ತಂದೆ, ಪತ್ನಿ ಹಾಗೂ ಮೂರು ವರ್ಷದ ಕಂದಮ್ಮನನ್ನು ಅಗಲಿದ್ದಾರೆ.
#BSFSoldier #HassanNews #Kumaraswamy #Chandigarh #UdayakalaNews #KarnatakaSoldier #RIP


