ಗಾಜಾಪಟ್ಟಿ, ಪ್ಯಾಲೆಸ್ತೇನ್: ದಕ್ಷಿಣ ಗಾಜಾದ ಖಾನ್ ಯೂನಿಸ್ನಲ್ಲಿರುವ ಪ್ರಮುಖ ನಾಸರ್ ವೈದ್ಯಕೀಯ ಸಂಕೀರ್ಣದ ಶಸ್ತ್ರಚಿಕಿತ್ಸಾ ವಿಭಾಗವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ನಡೆಸಿದ ಭೀಕರ ದಾಳಿಯಲ್ಲಿ ವೈದ್ಯಕೀಯ ಸಿಬ್ಬಂದಿ, ರೋಗಿಗಳು ಹಾಗೂ ಸಂಬಂಧಿಕರು ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಗಾಜಾ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಅಲ್ ಜಜೀರಾ ಈ ವರದಿ ಮಾಡಿದೆ.
ಆಸ್ಪತ್ರೆಯೇ ಟಾರ್ಗೆಟ್, ವಿಶ್ವ ಆರೋಗ್ಯ ಸಂಸ್ಥೆ ಆತಂಕ
ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕಟ್ಟಡದ ಮೇಲೆ ಮುಂಜಾನೆಯೇ ಈ ದಾಳಿ ನಡೆದಿದ್ದು, ಘಟನೆಯಲ್ಲಿ ಡಾ. ರಿಜ್ಕ್ ಅಬು ಶುಐರಾ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೈದ್ಯಕೀಯ ಸೌಲಭ್ಯಗಳು, ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳನ್ನು ರಕ್ಷಿಸಬೇಕಾದ ಅಂತಾರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಆಸ್ಪತ್ರೆಗಳನ್ನು ರಕ್ಷಿಸಲು ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಸಮುದಾಯ ಹಾಗೂ ವಿಶ್ವಸಂಸ್ಥೆ ತುರ್ತಾಗಿ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಸಹ ಸಾವು-ನೋವುಗಳನ್ನು ದೃಢಪಡಿಸಿದ್ದು, ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ತೀವ್ರ ಹಾನಿಯಾಗಿರುವುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ. 2023ರ ಅಕ್ಟೋಬರ್ನಿಂದ ಇಲ್ಲಿವರೆಗೆ ಪ್ಯಾಲೆಸ್ತೇನ್ನಲ್ಲಿನ ಆರೋಗ್ಯ ಸೌಲಭ್ಯಗಳ ಮೇಲೆ ಒಟ್ಟು 1,056 ದಾಳಿಗಳು ನಡೆದಿರುವುದನ್ನು ತಮ್ಮ ಸಂಸ್ಥೆ ದಾಖಲಿಸಿದ್ದು, ಈ ದಾಳಿಗಳಲ್ಲಿ ಬರೋಬ್ಬರಿ 1,010 ಮಂದಿ ಸಾವನ್ನಪ್ಪಿದ್ದಾರೆ ಮತ್ತು 1,725 ಮಂದಿ ಗಾಯಗೊಂಡಿದ್ದಾರೆ ಎಂದು ಟೆಡ್ರೋಸ್ ‘ಎಕ್ಸ್’ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಸ್ಪಷ್ಟನೆ ಹಾಗೂ ಹಮಾಸ್ ಕಮಾಂಡರ್ ಆರೋಪ
ಮತ್ತೊಂದೆಡೆ, ನಾಸರ್ ಆಸ್ಪತ್ರೆಯ ಆವರಣದೊಳಗೆ ಕಾರ್ಯಾಚರಣೆ ನಡೆಸುತ್ತಿದ್ದ ಹಮಾಸ್ನ ಮಿಲಿಟರಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಸಮರ್ಥಿಸಿಕೊಂಡಿವೆ. ಈ ದಾಳಿಯಲ್ಲಿ ಹಮಾಸ್ನ ಖಾನ್ ಯೂನಿಸ್ ಬ್ರಿಗೇಡ್ನ ಹಿರಿಯ ಕಮಾಂಡರ್ ಮುಹಮ್ಮದ್ ಅಬು ಇಸ್ಮಾಯಿಲ್ ಹತನಾಗಿದ್ದಾನೆ ಎಂದು ಐಡಿಎಫ್ ತಿಳಿಸಿದೆ. ಈತ ಯುದ್ಧದ ಸಮಯದಲ್ಲಿ ಆಸ್ಪತ್ರೆಯ ಒಳಗೇ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದನು ಮತ್ತು ಆಸ್ಪತ್ರೆಯ ಎರಡನೇ ಮಹಡಿಯನ್ನು ಹಮಾಸ್ ತನ್ನ ಮಿಲಿಟರಿ ಪ್ರಧಾನ ಕಚೇರಿಯಾಗಿ ಬಳಸಿತ್ತು ಎಂದು ಇಸ್ರೇಲಿ ಸೇನೆ ಗಂಭೀರ ಆರೋಪ ಮಾಡಿದೆ. ಅಲ್ಲಿ ಕಮಾಂಡರ್ಗಳು ಕಠಿಣ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು, ನಾಗರಿಕರಿಗೆ ಪ್ರವೇಶವಿರಲಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.
#GazaAttack #NasserHospital #IsraelPalestineConflict #WorldHealthOrganization #KhanYounis #MiddleEastNews #UdayakalaNews


