ಉದಯಕಾಲ ನ್ಯೂಸ್, ಮೈಸೂರು: ನನ್ನ ಅಧಿಕಾರದಲ್ಲಿರುವವರೆಗೆ ಜನ ಮೆಚ್ಚುವ ಕೆಲಸ ಮಾಡುತ್ತೇನೆ. ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರಿಗೆ ಮಾತ್ರವಲ್ಲ, ಯಾರಿಗೂ ಕೆಡುಕು ಬಯಸಿದವನಲ್ಲ. ಮುಂದೆಯೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಇದು ನನ್ನ ಬದ್ಧತೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಬುಧವಾರ ನಡೆದ ಸಂಶೋಧಕಿ ರಮ್ಯಾ ಅವರ ‘ಚಲಿಸುವ ಬಂಡೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕಾರಣದಲ್ಲಿ ಈಜುವುದು ಸುಲಭವಲ್ಲ, ಟೀಕೆಗಳಿಗೆ ಬಗ್ಗುವುದಿಲ್ಲ
ರಾಜ್ಯ ರಾಜಕಾರಣದ ವಿವಿಧ ಮಜಲುಗಳನ್ನು ಹಾಗೂ ಬದಲಾವಣೆಗಳನ್ನು ಕಣ್ಣಾರೆ ಕಂಡಿರುವುದಾಗಿ ತಿಳಿಸಿದ ಸಿಎಂ ಡಿ.ಕೆ.ಶಿವಕುಮಾರ್, ರಾಜಕಾರಣದಲ್ಲಿ ಈಜಿ ದಡ ಸೇರುವುದು ಅಷ್ಟು ಸುಲಭದ ಮಾತಲ್ಲ ಎಂದರು. ಕೆಲವರು ತಮ್ಮ ಬೆಳವಣಿಗೆಯನ್ನು ಸಹಿಸದೆ ನಕಾರಾತ್ಮಕ ಅಂಶಗಳನ್ನೇ ಹುಡುಕುತ್ತಿದ್ದಾರೆ ಮತ್ತು ತಾವೇನು ಮಾಡುತ್ತೇವೆ ಎಂದು ಕಾಯುತ್ತಿದ್ದಾರೆ ಎಂದರು. ವಿರೋಧಿಗಳ ಟೀಕೆಗಳಿಗೆ ತಾವು ಬಗ್ಗುವುದಿಲ್ಲವೆಂದೂ, ಜನರ ಮೇಲಿನ ನಂಬಿಕೆ ಹಾಗೂ ತಾಳ್ಮೆಯಿಂದಲೇ ಮುನ್ನಡೆಯುತ್ತಿರುವುದಾಗಿಯೂ ಸ್ಪಷ್ಟಪಡಿಸಿದರು.
ಅಂಬೇಡ್ಕರ್ ಅವರ ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದರು. ನಾವು ಉಳಿಸಿಕೊಂಡ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಇಂತಹ ಪುಸ್ತಕಗಳು ಅತ್ಯಗತ್ಯ. ಸಿದ್ದೇಶ್ವರ ಶ್ರೀಗಳು ಉತ್ತಮ ಪುಸ್ತಕಗಳು ನೂರಾರು ಗೆಳೆಯರಿಗೆ ಸಮಾನ ಎಂದು ಹೇಳಿದ್ದಾರೆ. ಗಾಂಧೀಜಿಯವರು ಪುಸ್ತಕ ಓದುವುದು ಸಂತೋಷ ನೀಡುವ ಹವ್ಯಾಸ ಎಂದು ಹೇಳಿದ್ದಾರೆ. ನನಗೆ ಪುಸ್ತಕಗಳನ್ನು ಸುದೀರ್ಘವಾಗಿ ಓದುವ ತಾಳ್ಮೆ ಕಡಿಮೆ. ಒಂದೊಂದು ಸಾಲು ಓದಿ ಪುಟ ತಿರುಗಿಸುವ ಅಭ್ಯಾಸವಿದೆ. ಆದರೂ ಪುಸ್ತಕಗಳು ಮಾನವ ಬದುಕಿನ ಬದಲಾವಣೆಗೆ ದೊಡ್ಡ ಕೊಡುಗೆ ನೀಡುತ್ತವೆ ಎಂದು ಹೇಳಿದರು.
ಇಂದು ಸೋನಿಯಾ ಗಾಂಧಿ ಅವರ ಪುಸ್ತಕವೂ ಬಂದಿದೆ. ಲಕ್ಷಾಂತರ ಪುಸ್ತಕಗಳು ಪ್ರಕಟವಾಗುತ್ತಿವೆ. ಒಬ್ಬೊಬ್ಬರ ಬದುಕಿನ ಅಂತರಂಗ, ಇತಿಹಾಸ, ಕಷ್ಟಗಳು ಮತ್ತು ಸಮಸ್ಯೆಗಳನ್ನು ತಿಳಿದುಕೊಳ್ಳಲು ಪುಸ್ತಕಗಳು ನೆರವಾಗುತ್ತವೆ. ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಂಶೋಧನೆ, ಆಸಕ್ತಿ, ತಾಳ್ಮೆ ಮತ್ತು ಪರಿಶ್ರಮ ಅಗತ್ಯ. ಎಲ್ಲರಿಗೂ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಶ್ವಾಸ 35 ವರ್ಷಗಳ ಹಿಂದೆಯೇ ಇತ್ತು. ಜ್ಯೋತಿಷಿ ದ್ವಾರಕನಾಥ್ ಅವರು ನನ್ನ ರಾಜಕೀಯ ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹೇಳಿದ್ದರು. ಟಿಕೆಟ್ ಸಿಗುತ್ತದೆ, ಸಚಿವನಾಗುತ್ತೀಯ, ಟಿಕೆಟ್ ಸಿಗದಿದ್ದರೂ ಗೆಲ್ಲುತ್ತೀಯ ಎಂದು ಹೇಳಿದ್ದರು. ರೇವಣ್ಣ ಸೇರಿದಂತೆ ಅನೇಕ ನಾಯಕರಿಗೆ ಈ ಸ್ಥಾನಕ್ಕೆ ಬರಲು ಪಟ್ಟ ಶ್ರಮ ಗೊತ್ತಿದೆ. ನಾನು ಸುಮ್ಮನೆ ಈ ಸ್ಥಾನಕ್ಕೆ ಬಂದಿಲ್ಲ. ನನ್ನ 40 ವರ್ಷಗಳ ಪರಿಶ್ರಮ, ಅನೇಕ ನಾಯಕರನ್ನು ಬೆಳೆಸಿದ ಅನುಭವ ಇದರ ಹಿಂದೆ ಇದೆ. 136 ಸ್ಥಾನಗಳನ್ನು ಗೆಲ್ಲಲು ಜನರು ನಮ್ಮ ಮೇಲೆ ಇಟ್ಟ ವಿಶ್ವಾಸವೂ ಕಾರಣ ಎಂದರು.
ಸಿದ್ದರಾಮಯ್ಯ ಜತೆಗಿನ ಒಡನಾಟ ನೆನೆದ ಕನಕಪುರ ಬಂಡೆ
ಸಿದ್ದರಾಮಯ್ಯ ಅವರ ಜತೆಗೂಡಿ ಕೆಲಸ ಮಾಡಿರುವುದಾಗಿ ಸ್ಮರಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲದೆ ಯಾರಿಗೂ ಕೆಟ್ಟದ್ದನ್ನು ಬಯಸುವ ವ್ಯಕ್ತಿ ತಾನಲ್ಲ ಎಂದರು. ಕುಮಾರಸ್ವಾಮಿ ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಸರ್ಕಾರದಲ್ಲಿದ್ದಾಗ ಅವರಿಗೆ ತೊಂದರೆ ಕೊಡಲು ಬಯಸಿರಲಿಲ್ಲ. ಸಿಕ್ಕಿರುವ ಅಧಿಕಾರಾವಧಿಯಲ್ಲಿ ಯಾರೊಬ್ಬರಿಗೂ ಅನಗತ್ಯ ತೊಂದರೆಯಾಗಬಾರದು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದೇ ತಮ್ಮ ಆಶಯ ಎಂದು ಭರವಸೆ ನೀಡಿದರು.
ಜೈಲು ಅನುಭವ ಹಾಗೂ ಪದವಿ ಸಿಕ್ಕ ಸಂತೋಷ
ಸುಮಾರು 48ನೇ ವಯಸ್ಸಿನಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಸಂದರ್ಭವು ತಮ್ಮ ಬದುಕಿನ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದೆಂದು ಸ್ಮರಿಸಿದರು. ತಮಗೆ ಜೈಲುವಾಸದಂತಹ ಕಷ್ಟಗಳು ಎದುರಾದರೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ ಎಂದು ನೆನಪಿಸಿಕೊಂಡರು. ತಮ್ಮ ಬದುಕು ತೆರೆದ ಪುಸ್ತಕವಿದ್ದಂತೆ ಎಂದ ಅವರು, ಸಮಾಜಕ್ಕೆ ಉಪಯುಕ್ತವಾಗುವಂತಹ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗುವುದೇ ತಮ್ಮ ಗುರಿ ಎಂದು ತಿಳಿಸಿದರು.
#CMDKShivakumar #ChalisuvaBande #MysuruNews #KarnatakaPolitics #Siddaramaiah #UdayakalaNews

