ಉದಯಕಾಲ ನ್ಯೂಸ್, ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ದನ-ಮೇಕೆ ಮೇಯಿಸಲು ತೆರಳಿದ್ದ ಆದಿವಾಸಿ ಮಹಿಳೆಯೊಬ್ಬರ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಸಾಯಿಸಿತ್ತು.ಈ ದುರ್ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಇಂದು ಅರಣ್ಯಾಧಿಕಾರಿಗಳ ವಿರುದ್ಧ ರೊಚ್ಚಿಗೆದ್ದರು. ಕಾಡಂಚಿನ ಜನರಿಗೆ ಶಾಶ್ವತ ರಕ್ಷಣೆ ಕಲ್ಪಿಸುವಂತೆ ಒತ್ತಾಯಿಸಿದಾಗ ಅರಣ್ಯ ಇಲಾಖೆಯು ಮೃತರ ಕುಟುಂಬಕ್ಕೆ ತಕ್ಷಣವೇ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಅರಣ್ಯ ಪ್ರದೇಶದ ವ್ಯಾಪ್ತಿಯ ಡೋರನಕಟ್ಟೆ ಕಾಲೋನಿಯ ನಿವಾಸಿ ಮಾಚಮ್ಮ (45) ಹುಲಿ ದಾಳಿಗೆ ಬಲಿಯಾದ ದುರ್ದೈವಿ ಮಹಿಳೆ. ಮಾಚಮ್ಮ ಬುಧವಾರ ಮಧ್ಯಾಹ್ನ ತಮ್ಮ ಜಮೀನಿನ ಸಮೀಪ ಮೇಕೆಗಳನ್ನು ಮೇಯಿಸಲು ತೆರಳಿದ್ದ ವೇಳೆ, ಪೊದೆಯಲ್ಲಿ ಅಡಗಿದ್ದ ಹುಲಿಯೊಂದು ಏಕಾಏಕಿ ಎರಗಿ ಬಂದು ಆಕೆಯನ್ನು ಎಳೆದೊಯ್ದಿತ್ತು. ಈ ವೇಳೆ ಅಕ್ಕಪಕ್ಕದಲ್ಲಿದ್ದವರು ಜೋರಾಗಿ ಕೂಗಿಕೊಂಡು ಸಹಾಯಕ್ಕೆ ಧಾವಿಸಿದರೂ, ಹುಲಿಯ ಅಟ್ಟಹಾಸದ ಮುಂದೆ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಕಾಡಿನಲ್ಲಿ ತೀವ್ರ ಶೋಧ; ಮುಖ ಹಾಗೂ ಎದೆಗೆ ಬಲವಾದ ಗಾಯ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ನೂರಾರು ಗ್ರಾಮಸ್ಥರು ಕಾಡಿನೊಳಗೆ ಹಲವು ಗಂಟೆಗಳ ಕಾಲ ತೀವ್ರ ಶೋಧ ಕಾರ್ಯ ನಡೆಸಿದರು. ಸಂಜೆ 5 ಗಂಟೆಯ ಸುಮಾರಿಗೆ ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಾಚಮ್ಮ ಅವರ ಮೃತದೇಹ ಪತ್ತೆಯಾಯಿತು. ಹುಲಿಯು ಮಹಿಳೆಯ ಮುಖ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಕಚ್ಚಿದ್ದರಿಂದ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದು ದೃಢಪಟ್ಟಿತು.
ಈ ಭಾಗದಲ್ಲಿ ಹಿಂದೆ ಕೂಡ ಕಾಡುಪ್ರಾಣಿಗಳ ದಾಳಿಯಿಂದ ರೈತರು ಹಾಗೂ ಸ್ಥಳೀಯರು ಹಲವು ಬಾರಿ ತೊಂದರೆ ಅನುಭವಿಸಿದ್ದಾರೆ. ಇದೀಗ ಆದಿವಾಸಿ ಮಹಿಳೆಯೊಬ್ಬರು ಹುಲಿ ಬಾಯಿಗೆ ಸಿಕ್ಕು ಪ್ರಾಣ ಕಳೆದುಕೊಂಡಿರುವುದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಕೇವಲ ಹಣಕಾಸಿನ ಪರಿಹಾರ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಬದಲಿಗೆ ಕಾಡಂಚಿನ ಜನರಿಗೆ ಶಾಶ್ವತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಿಎಫ್ ಭೇಟಿ ಹಾಗೂ ಹುಲಿ ಸೆರೆಗೆ ಎಲಿಫೆಂಟ್ ಫೋರ್ಸ್ ಕಾರ್ಯಾಚರಣೆ
ಸಂತ್ರಸ್ತೆಯ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಿಎಫ್ (CF) ನಂದೀಶ್ ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ಮಾಚಮ್ಮ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ಅರಣ್ಯ ಇಲಾಖೆ ವತಿಯಿಂದ 20 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಸ್ಥಳದಲ್ಲೇ ವಿತರಿಸಿದರು.
ಜೊತೆಗೆ ಮಾತನಾಡಿದ ಅವರು, ಮಹಿಳೆಯನ್ನು ಬಲಿಪಡೆದಿರುವ ಹುಲಿಯನ್ನು ಆದಷ್ಟು ಬೇಗ ಸೆರೆಹಿಡಿಯಲು ಆನೆಗಳ ಪಡೆ ಮೂಲಕ ವಿಶೇಷ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಈಗಾಗಲೇ ಕಟ್ಟುನಿಟ್ಟಿನ ಆದೇಶ ನೀಡಿರುವುದಾಗಿ ತಿಳಿಸಿದರು. ಮೃತದೇಹವನ್ನು ಹೆಡಿಯಾಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗದಂತೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
#TigerAttack #MysoreNews #Nanjangud #AdivasiWomanDead #BandipurForest #UdayakalaNews


