Tuesday, November 03, 2026
Menu

ಬೃಹತ್ ಎಂಡಿಎಂಎ ಜಾಲ ಭೇದ: 15.30 ಲಕ್ಷ ರೂ. ಮೌಲ್ಯದ ಮಾದಕವಸ್ತು ಜಪ್ತಿ, ಮಹಿಳೆ ಬಂಧನ

ಉದಯಕಾಲ ನ್ಯೂಸ್‌, ದಕ್ಷಿಣ ಕನ್ನಡ: ಮಂಗಳೂರು ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಗುರಿಯಾಗಿಸಿಕೊಂಡು ಅವರನ್ನು ಸೆಳೆದು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಪೂರೈಕೆ ಮಾಡುತ್ತಿದ್ದ ಕುಖ್ಯಾತ ಜಾಲವನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಪ್ರಮುಖ ಆರೋಪಿಯಾದ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಉಜ್ಜೋಡಿಯ ಅಪಾರ್ಟ್‌ಮೆಂಟ್ ಮೇಲೆ ದಿಢೀರ್ ದಾಳಿ: 153 ಗ್ರಾಂ ಎಂಡಿಎಂಎ ವಶ

ನವೆಂಬರ್ 1ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮಾದಕವಸ್ತು ಸೇವನೆ ಪ್ರಕರಣದ ಆರೋಪಿಗಳನ್ನು ಕಠಿಣ ವಿಚಾರಣೆಗೊಳಪಡಿಸಿದಾಗ, ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಪ್ರಮುಖ ಸುಳಿವು ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಎಚ್ಚೆತ್ತ ಪೊಲೀಸರು, ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗುರಿಂಗಾನ ನಿವಾಸಿ, ರಫೀಕ್ ಎಂಬವರ ಪತ್ನಿ ನಸೀಮಾ @ ನಸೀಮ (42) ಎಂಬಾಕೆಯನ್ನು ಬಂಧಿಸಿದ್ದಾರೆ. ಆರೋಪಿತೆಯು ಮಂಗಳೂರಿನ ಪಂಪ್‌ವೆಲ್ ಸಮೀಪದ ಉಜ್ಜೋಡಿಯ ‘ರಾಧಾ ರೆಸಿಡೆನ್ಸಿ’ ಅಪಾರ್ಟ್‌ಮೆಂಟ್‌ನ ಒಂದನೇ ಮಹಡಿಯ ಫ್ಲ್ಯಾಟ್‌ನಲ್ಲಿ ವಾಸವಿದ್ದುಕೊಂಡು ಈ ದಂಧೆ ನಡೆಸುತ್ತಿದ್ದರು. ಆಕೆಯ ಫ್ಲ್ಯಾಟ್ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು, ಅಂದಾಜು 15,30,000 ರೂಪಾಯಿ ಮೌಲ್ಯದ 153 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ವಿದ್ಯಾರ್ಥಿಗಳೇ ಟಾರ್ಗೆಟ್‌: ಮುಂದುವರಿದ ತನಿಖೆ

ಪ್ರಾಥಮಿಕ ವಿಚಾರಣೆಯಿಂದ ಆರೋಪಿತೆ ನಸೀಮಾ ಮಂಗಳೂರು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಟಾರ್ಗೆಟ್ ಮಾಡಿ ಎಂಡಿಎಂಎ ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ. ಬಂಧಿತಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಈ ಬೃಹತ್ ಡ್ರಗ್ಸ್ ಜಾಲದ ಹಿಂದೆ ಇಂದಿಗೂ ಕೆಲವರು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತೀಚೆಗೆ ಪಂಜಾಬ್‌ನಿಂದ ಕೊರಿಯರ್ ಮೂಲಕ ವಾಟರ್ ಪ್ಯೂರಿಫೈಯರ್ ಒಳಗೆ ಬಚ್ಚಿಟ್ಟು ಡ್ರಗ್ಸ್ ತರಿಸುತ್ತಿದ್ದ ಅಂತಾರಾಜ್ಯ ಜಾಲವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದು, ಮಂಗಳೂರಿನಲ್ಲಿ ಮಾದಕವಸ್ತು ಹಾವಿಕೆಗೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

#MangaluruPolice #MDMAArrest #CCBMangaluru #DrugFreeMangaluru #UdayakalaNews #CrimeNews #KarnatakaPolice

Related Posts

Leave a Reply

Your email address will not be published. Required fields are marked *