ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವ ಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯದ 33 ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಸಹಾಯಕ (FDA) ಹಾಗೂ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಇಂದಿನಿಂದಲೇ (ಅಕ್ಟೋಬರ್ 30) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ದಿನಾಂಕಗಳು ಮತ್ತು ಅರ್ಜಿ ಸಲ್ಲಿಕೆ ವಿವರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆಯ ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂದು ಅಕ್ಟೋಬರ್ 30ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್ 25
ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ: ನವೆಂಬರ್ 26
ಅಭ್ಯರ್ಥಿಗಳು KEA ಅಧಿಕೃತ ಜಾಲತಾಣವಾದ cetonline.karnataka.gov.in ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ
ಒಟ್ಟು 5,431 ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ವೃಂದದ ಹುದ್ದೆಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ
| ಹುದ್ದೆಯ ಹೆಸರು | ಸಾಮಾನ್ಯ ವೃಂದ (General) | ಕಲ್ಯಾಣ ಕರ್ನಾಟಕ (HK) | ಒಟ್ಟು ಹುದ್ದೆಗಳು | ವಿದ್ಯಾರ್ಹತೆ |
| ಪ್ರಥಮ ದರ್ಜೆ ಸಹಾಯಕ (FDA) | 2,183 | 563 | 2,726 | ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) |
| ದ್ವಿತೀಯ ದರ್ಜೆ ಸಹಾಯಕ (SDA) | 2,070 | 637 | 2,705 | ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ |
| ಒಟ್ಟು ಹುದ್ದೆಗಳು | 4,253 | 1,200 | 5,431 | – |
ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾನುಸಾರ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗಳ ಮೂಲಕವೇ ಅಭ್ಯರ್ಥಿಗಳ ಅಂತಿಮ ಆಯ್ಕೆ ನಡೆಯಲಿದೆ.
2027ರ ಜನವರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ
ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಲಿಖಿತ ಪರೀಕ್ಷೆಗಳನ್ನು 2027ರ ಜನವರಿ ತಿಂಗಳಲ್ಲಿ ನಡೆಸಲು ಪ್ರಾಧಿಕಾರ ವೇಳಾಪಟ್ಟಿ ನಿಗದಿಪಡಿಸಿದೆ. 2027ರ ಜನವರಿ 8, 9, 10 ಹಾಗೂ ಜನವರಿ 16 ಮತ್ತು 17ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ಜರುಗಲಿವೆ. ಉದ್ಯೋಗಾಕಾಂಕ್ಷಿಗಳು ಕೊನೆಯ ಕ್ಷಣದ ಗೊಂದಲAvoid ಮಾಡಲು ಮೊದಲೇ ಅರ್ಜಿ ಸಲ್ಲಿಸಿ, ಪರೀಕ್ಷಾ ಸಿದ್ಧತೆಯನ್ನು ಚುರುಕುಗೊಳಿಸುವಂತೆ ಕೆಇಎ ಸಲಹೆ ನೀಡಿದೆ.
#FDASDARecruitment #KarnatakaJobs #KEA #GovernmentJobs #UdayakalaNews #JobSeekers #KarnatakaCareers


